ಹೊಸದಿಲ್ಲಿ: ರೈಲುಗಳ ಕುರಿತು ಪ್ರಯಾಣಿಕರಲ್ಲಿ ಉಂಟಾದ ಗೊಂದಲವೇ ಕಾಲ್ತುಳಿತಕ್ಕೆ ಕಾರಣ!

PC : PTI
ಹೊಸದಿಲ್ಲಿ: 'ಪ್ರಯಾಗ್ರಾಜ್ ಎಕ್ಸ್ಪ್ರೆಸ್ ಮತ್ತು ಪ್ರಯಾಗ್ರಾಜ್ ಸ್ಪೆಷಲ್' ರೈಲುಗಳ ಬಗ್ಗೆ ಗೊಂದಲಕ್ಕೀಡಾಗಿದ್ದರಿಂದ ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿದೆ ಎಂದು ಆರಂಭಿಕ ತನಿಖೆಯಲ್ಲಿ ಬಯಲಾಗಿದೆ ಎಂದು ದಿಲ್ಲಿ ಪೊಲೀಸ್ ಮೂಲಗಳು ತಿಳಿಸಿವೆ.
'ಪ್ರಯಾಗ್ರಾಜ್' ಎಂಬ ಮೊದಲ ಹೆಸರನ್ನು ಹೊಂದಿರುವ ರೈಲುಗಳ ಬಗ್ಗೆ ಉಂಟಾಗಿರುವ ಗೊಂದಲ ಕಾಲ್ತುಳಿತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. 'ಪ್ರಯಾಗ್ರಾಜ್ ವಿಶೇಷ' ರೈಲು ಪ್ಲಾಟ್ ಫಾರ್ಮ್ ನಂಬರ್ 16ಕ್ಕೆ ಆಗಮಿಸಿರುವ ಬಗ್ಗೆ ಧ್ವನಿವರ್ಧಕಗಳಲ್ಲಿ ಘೋಷಣೆ ಮಾಡಲಾಗಿದೆ. ಇದು ಪ್ರಯಾಣಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಏಕೆಂದರೆ ಪ್ರಯಾಗ್ರಾಜ್ ಎಕ್ಸ್ಪ್ರೆಸ್ ಪ್ಲಾಟ್ ಫಾರ್ಮ್ 14ಕ್ಕೆ ಮೊದಲೇ ತಲುಪಿತ್ತು.
ಪ್ಲಾಟ್ ಫಾರ್ಮ್ ನಂಬರ್ 14ಕ್ಕೆ ತಲುಪಿದ ಜನರು ನಮ್ಮ ರೈಲು ಪ್ಲಾಟ್ ಫಾರ್ಮ್ ನಂಬರ್ 16ಕ್ಕೆ ಬರುತ್ತಿದೆ ಎಂದು ಭಾವಿಸಿ ಅದರ ಕಡೆಗೆ ಧಾವಿಸಿದರು, ಇದು ಕಾಲ್ತುಳಿತಕ್ಕೆ ಕಾರಣವಾಯಿತು. ಇದಲ್ಲದೆ ಹೆಚ್ಚುವರಿಯಾಗಿ, ನಾಲ್ಕು ರೈಲುಗಳು ಪ್ರಯಾಗ್ರಾಜ್ಗೆ ಹೋಗುತ್ತಿದ್ದವು, ಅದರಲ್ಲಿ ಮೂರು ವಿಳಂಬವಾಯಿತು, ಇದು ಅನಿರೀಕ್ಷಿತ ಜನದಟ್ಟಣೆಗೆ ಕಾರಣವಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರತ್ಯಕ್ಷದರ್ಶಿಯೋರ್ವರು ಈ ಕುರಿತು ಪ್ರತಿಕ್ರಿಯಿಸಿ, ರೈಲಿನ ಹೆಸರುಗಳು ಮತ್ತು ರೈಲುಗಳ ಪ್ಲಾಟ್ ಫಾರ್ಮ್ ಗಳ ಬದಲಾವಣೆ ಸಂಬಂಧಿಸಿದಂತೆ ಪ್ರಯಾಣಿಕರಲ್ಲಿ ಗೊಂದಲವಿತ್ತು. ಇದು ಅಂತಿಮವಾಗಿ ಕಾಲ್ತುಳಿತಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.