ಬಾಂಗ್ಲಾದೇಶಕ್ಕೆ ಗಡಿಪಾರಾಗಿದ್ದ ಗರ್ಭಿಣಿ ಮಹಿಳೆ, ಪುತ್ರ ಭಾರತಕ್ಕೆ ವಾಪಾಸ್

Photo:X/@SamirulAITC
ಹೊಸದಿಲ್ಲಿ: ಪಶ್ಚಿಮ ಬಂಗಾಳದ ಗರ್ಭಿಣಿ ಮಹಿಳೆ ಮತ್ತು ಅವರ ಎಂಟು ವರ್ಷದ ಪುತ್ರನನ್ನು ಅಧಿಕಾರಿಗಳು ವಲಸಿಗರು ಎಂದು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಿದ್ದರು. ಆದರೆ, ಶುಕ್ರವಾರ ಅವರನ್ನು ಭಾರತಕ್ಕೆ ಮರಳಿ ಕರೆತರಲಾಗಿದೆ.
ಸುನಾಲಿ ಖಾತುನ್ ಎಂಬ ಮಹಿಳೆ ಮತ್ತು ಅವರ ಮಗ ಶಬೀರ್ ಮಹಾದಿಪುರ ಗಡಿ ಮೂಲಕ ಪಶ್ಚಿಮ ಬಂಗಾಳಕ್ಕೆ ಪ್ರವೇಶಿಸಿದ್ದಾರೆ. ಆ ಬಳಿಕ ಬಿರ್ಭೂಮ್ನಲ್ಲಿರುವ ಮನೆಗೆ ಪ್ರಯಾಣಿಸಲು ಸಾಧ್ಯವೇ ಎಂದು ನಿರ್ಧರಿಸಲು ಆಕೆಗೆ ಮಾಲ್ಡಾದ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಯಿತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಖಾತುನ್ ಅವರ ಪತಿ ದಾನಿಶ್ ಇನ್ನೂ ಬಾಂಗ್ಲಾದೇಶದಲ್ಲಿದ್ದಾರೆ. ಕೇಂದ್ರ ಸರಕಾರ ಬುಧವಾರ ಸುಪ್ರೀಂ ಕೋರ್ಟ್ಗೆ, ಮಾನವೀಯತೆಯ ಆಧಾರದ ಮೇಲೆ ಖಾತುನ್ ಮತ್ತು ಅವರ ಮಗನನ್ನು ವಾಪಸ್ ಕರೆತರುವುದಾಗಿ ತಿಳಿಸಿತ್ತು.
ಖಾತುನ್, ಅವರ ಪುತ್ರ ಮತ್ತು ಪತಿ ದಾನಿಶ್ ಅವರನ್ನು ಸೋಮವಾರ ಸಂಜೆ ಬಾಂಗ್ಲಾದೇಶದಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಜೂನ್ನಲ್ಲಿ ಭಾರತೀಯ ಅಧಿಕಾರಿಗಳು ಅವರನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಿದ್ದರು.
ಖಾತುನ್ ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯವರು. ಖಾತುನ್, ಅವರ ಪತಿ ಮತ್ತು ಮಗನನ್ನು ಜೂನ್ 20ರಂದು ದಿಲ್ಲಿಯಲ್ಲಿ ಬಂಧಿಸಲಾಗಿತ್ತು. ನಂತರ ಮೂವರನ್ನೂ ಬಾಂಗ್ಲಾದೇಶಕ್ಕೆ ಕಳುಹಿಸಲಾಗಿತ್ತು.
ಸೆಪ್ಟೆಂಬರ್ 26 ರಂದು ಕಲ್ಕತ್ತಾ ಹೈಕೋರ್ಟ್ ಆರು ಜನರ ವಿರುದ್ಧದ ಗಡಿಪಾರು ಆದೇಶವನ್ನು ರದ್ದುಗೊಳಿಸಿತ್ತು. ನಾಲ್ಕು ವಾರಗಳಲ್ಲಿ ಅವರನ್ನು ಪಶ್ಚಿಮ ಬಂಗಾಳಕ್ಕೆ ಮರಳಿ ಕರೆತರುವಂತೆ ನಿರ್ದೇಶಿಸಿತ್ತು. ಖಾತುನ್ ಅವರ ತಂದೆ ಭೋದು ಶೇಖ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಹೈಕೋರ್ಟ್ ಈ ಆದೇಶವನ್ನು ಅಂಗೀಕರಿಸಿತ್ತು.







