ದಿಲ್ಲಿ | ಗರ್ಭಿಣಿಯನ್ನು ಇರಿದು ಹತ್ಯೆಗೈದ ಮಾಜಿ ಸಂಗಾತಿ; ದಾಳಿಕೋರನ ಹತ್ಯೆಗೈದ ಪತಿ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಗರ್ಭಿಣಿ ಮಹಿಳೆಯೊಬ್ಬರನ್ನು ಆಕೆಯ ಮಾಜಿ ಸಂಗಾತಿ ಇರಿದು ಹತ್ಯೆಗೈದಿರುವ ಘಟನೆ ದಿಲ್ಲಿಯ ನಬಿ ಕರೀಂ ಪ್ರದೇಶದಲ್ಲಿ ನಡೆದಿದ್ದು, ಇದರ ಬೆನ್ನಿಗೇ, ದಾಳಿಕೋರನ ಮೇಲೆ ಪ್ರತಿ ದಾಳಿ ನಡೆಸಿದ ಮಹಿಳೆಯ ಪತಿ, ಆತನನ್ನು ಹತ್ಯೆಗೈದಿದ್ದಾನೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಶಾಲಿನಿ (22) ಹಾಗೂ ಆಶು ಅಲಿಯಾಸ್ ಶೈಲೇಂದ್ರ (34) ಎಂದು ಗುರುತಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಪ್ರಕಟನೆ ಬಿಡುಗಡೆ ಮಾಡಿರುವ ಉಪ ಪೊಲೀಸ್ ಆಯುಕ್ತ (ಕೇಂದ್ರ) ನಿಧಿನ್ ವಲ್ಸನ್, “ತನ್ನ ಪತ್ನಿಯನ್ನು ರಕ್ಷಿಸುವ ಪ್ರಯತ್ನದಲ್ಲಿ 24 ವರ್ಷದ ಆಕೆಯ ಪತಿ ಆಕಾಶ್ ಗೆ ಹಲವು ಇರಿತದ ಗಾಯಗಳಾಗಿದ್ದು, ಆತನಿಗೆ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಹೇಳಿದ್ದಾರೆ.
“ಈ ಘಟನೆ ಶನಿವಾರ ರಾತ್ರಿ ಸುಮಾರು 10.15ಕ್ಕೆ ಸಂಭವಿಸಿದ್ದು, ಈ ವೇಳೆ ಶಾಲಿನಿ ಮತ್ತು ಆಕಾಶ್ ಕುತುಬ್ ರಸ್ತೆಯಲ್ಲಿರುವ ಶಾಲಿನಿ ಅವರ ತಾಯಿಯನ್ನು ಭೇಟಿ ಮಾಡಲು ತೆರಳುತ್ತಿದ್ದರು ಎನ್ನಲಾಗಿದೆ. ಆಗ ದಿಢೀರನೆ ಅವರನ್ನು ಎದುರುಗೊಂಡಿರುವ ಆರೋಪಿ, ಆಕಾಶ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ” ಎಂದು ಅವರು ತಿಳಿಸಿದ್ದಾರೆ.
“ಇ-ಆಟೋರಿಕ್ಷಾದಲ್ಲಿ ಕುಳಿತಿದ್ದ ಶಾಲಿನಿಗೆ ಆರೋಪಿ ಹಲವಾರು ಬಾರಿ ಇರಿದಿದ್ದಾನೆ. ಈ ವೇಳೆ ಆಕಾಶ್ ಆಕೆಯ ರಕ್ಷಣೆಗೆ ಧಾವಿಸಿದರೂ, ಆತನಿಗೂ ಆಶು ಇರಿದಿದ್ದಾನೆ. ಆದರೆ, ಆಶುವನ್ನು ಕೆಳಕ್ಕುರುಳಿಸುವಲ್ಲಿ ಯಶಸ್ವಿಯಾಗಿರುವ ಆಕಾಶ್, ಆತನಿಂದ ಚಾಕು ಕಸಿದುಕೊಂಡು, ಆತನಿಗೆ ಇರಿದಿದ್ದಾನೆ” ಎಂದು ಅವರು ತಿಳಿಸಿದ್ದಾರೆ.
ತಕ್ಷಣವೇ ಶಾಲಿನಿಯ ಸಹೋದರ ರೋಹಿತ್ ಹಾಗೂ ಕೆಲವು ಸ್ಥಳೀಯ ನಿವಾಸಿಗಳು ಮೂವರನ್ನು ಆಸ್ಪತ್ರೆಗೆ ಕರೆದೊಯ್ದರೂ, ಶಾಲಿನಿ ಮತ್ತು ಆಶು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಶಾಲಿನಿಯ ತಾಯಿ ಶೀಲಾ ನೀಡಿದ ದೂರನ್ನು ಆಧರಿಸಿ, ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ನಬಿ ಕರೀಂ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.







