ರಾಷ್ಟ್ರಪತಿ, ರಾಜ್ಯಪಾಲರು ಸಚಿವ ಸಂಪುಟದ ಸಲಹೆಯಂತೆ ಕೆಲಸ ಮಾಡುತ್ತಾರೆ: ಧನ್ಕರ್ಗೆ ತಿರುಗೇಟು ನೀಡಿದ ಕಪಿಲ್ ಸಿಬಲ್

ಕಪಿಲ್ ಸಿಬಲ್ , ಜಗದೀಪ್ ಧನ್ಕರ್ | PTI
ಹೊಸದಿಲ್ಲಿ: ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಮಸೂದೆಗಳನ್ನು ತಡೆಹಿಡಿದಿರುವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಟೀಕಿಸಿರುವುದಕ್ಕಾಗಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ರನ್ನು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯಪಾಲರುಗಳು ಮತ್ತು ರಾಷ್ಟ್ರಪತಿ ಸಚಿವ ಸಂಪುಟದ ‘‘ಸಹಾಯ ಮತ್ತು ಸಲಹೆಯಂತೆ’’ ಕಾರ್ಯನಿರ್ವಹಿಸುತ್ತಾರೆ ಎನ್ನುವುದು ಉಪರಾಷ್ಟ್ರಪತಿಗೆ ತಿಳಿದಿರಬೇಕು ಎಂದು ಸಿಬಲ್ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ‘ಸೂಪರ್ ಪಾರ್ಲಿಮೆಂಟ್’ ಆಗುವಂತಿಲ್ಲ ಮತ್ತು ಭಾರತದ ರಾಷ್ಟ್ರಪತಿಗೆ ನಿರ್ದೇಶನ ನೀಡಲು ಆರಂಭಿಸುವಂತಿಲ್ಲ ಎಂಬ ಧನ್ಕರ್ ರ ಹೇಳಿಕೆಗೆ ಕಪಿಲ್ ಸಿಬಲ್ ಈ ಪ್ರತಿಕ್ರಿಯೆ ನೀಡಿದ್ದಾರೆ.
‘‘ವಾಸ್ತವವಾಗಿ, ರಾಜ್ಯಪಾಲರು ಮಸೂದೆಗಳನ್ನು ತಡೆಹಿಡಿದಿರುವುದು ಶಾಸಕಾಂಗದ ಪಾರಮ್ಯದ ಮೇಲಿನ ದಾಳಿಯಾಗಿದೆ’’ ಎಂದು ಅವರು ಹೇಳಿದರು.
‘‘ಇದು ಧನ್ಕರ್ ಜಿ ಅವರಿಗೆ ಗೊತ್ತಿರಬೇಕು. ರಾಷ್ಟ್ರಪತಿಯವರ ಅಧಿಕಾರಗಳನ್ನು ಹೇಗೆ ಮೊಟಕುಗೊಳಿಸಲು ಸಾಧ್ಯ ಎಂದು ಅವರು ಕೇಳುತ್ತಾರೆ. ಆದರೆ, ಅವರ ಅಧಿಕಾರಗಳನ್ನು ಯಾರು ಮೊಟಕುಗೊಳಿಸಿದ್ದಾರೆ? ಉದಾಹರಣೆಗೆ; ಒಬ್ಬ ಸಚಿವರು ರಾಜ್ಯಪಾಲರ ಬಳಿಗೆ ಹೋಗಿ ಅಲ್ಲೇ ಎರಡು ವರ್ಷಗಳ ಕಾಲ ಇದ್ದು ಸಾರ್ವಜನಿಕ ಮಹತ್ವದ ವಿಷಯಗಳನ್ನು ಪ್ರಸ್ತಾವಿಸುತ್ತಾರೆ. ಆ ವಿಷಯಗಳನ್ನು ನಿರ್ಲಕ್ಷಿಸಲು ರಾಜ್ಯಪಾಲರಿಗೆ ಸಾಧ್ಯವೇ?’’ ಎಂಬುದಾಗಿ ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷರೂ ಆಗಿರುವ ಸಿಬಲ್ ಪ್ರಶ್ನಿಸಿದರು.
‘‘ವಾಸ್ತವವಾಗಿ ಇದು ಶಾಸಕಾಂಗದ ಪಾರಮ್ಯದ ಮೇಲಿನ ದಾಳಿಯಾಗಿದೆ. ಆದರೆ, ಇಲ್ಲಿ ವಿಷಯವನ್ನು ತಿರುಚಲಾಗಿದೆ. ಸಂಸತ್ತು ಒಂದು ಮಸೂದೆಯನ್ನು ಅಂಗೀಕರಿಸಿದರೆ, ಅದರ ಅನುಷ್ಠಾನವನ್ನು ರಾಷ್ಟ್ರಪತಿಯವರು ಅನಿರ್ದಿಷ್ಟಾವಧಿಗೆ ತಡೆಹಿಡಿಯಲು ಸಾಧ್ಯವೇ? ಅದಕ್ಕೆ ರಾಷ್ಟ್ರಪತಿಯವರು ಸಹಿ ಹಾಕದಿದ್ದರೂ, ಅದರ ಬಗ್ಗೆ ಮಾತನಾಡಲು ಯಾರಿಗೂ ಹಕ್ಕಿಲ್ಲವೇ?’’ ಎಂದು ಅವರು ಪ್ರಶ್ನಿಸಿದರು.
ಗುರುವಾರ ರಾಜ್ಯಸಭೆಯಲ್ಲಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ್ದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಸುಪ್ರೀಂ ಕೋರ್ಟ್ ತೀರ್ಪು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಕೆಲವು ನ್ಯಾಯಾಧೀಶರು ‘‘ಶಾಸನಗಳನ್ನು ಮಾಡುತ್ತಾರೆ, ಕಾರ್ಯಾಂಗದ ಕೆಲಸಗಳನ್ನು ನಿರ್ವಹಿಸುತ್ತಾರೆ ಮತ್ತು ಸೂಪರ್ ಸಂಸತ್ ನಂತೆ ವರ್ತಿಸುತ್ತಾರೆ’’ ಎಂದು ಅವರು ಹೇಳಿದ್ದರು.
‘‘ಇತ್ತೀಚಿನ ತೀರ್ಪೊಂದು ರಾಷ್ಟ್ರಪತಿಗೆ ನಿರ್ದೇಶನವೊಂದನ್ನು ನೀಡಿದೆ. ನಾವು ಎಲ್ಲಿಗೆ ಸಾಗುತ್ತಿದ್ದೇವೆ? ದೇಶದಲ್ಲಿ ಏನು ನಡೆಯುತ್ತಿದೆ? ನಾವು ಈ ವಿಷಯವನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳಬೇಕು. ಇದರ ಬಗ್ಗೆ ಯಾರಾದರೂ ಮೇಲ್ಮನವಿ ಸಲ್ಲಿಸತ್ತಾರೆಯೇ, ಇಲ್ಲವೇ ಎನ್ನುವುದು ಮುಖ್ಯವಲ್ಲ. ಈ ದಿನವನ್ನು ನೋಡುವುದಕ್ಕಾಗಿ ನಾವು ಪ್ರಜಾಪ್ರಭುತ್ವವನ್ನು ಕೇಳಿಲ್ಲ’’ ಎಂದು ಧನ್ಕರ್ ಹೇಳಿದ್ದರು.







