ಮಸೂದೆ ಅನುಮೋದನೆಗೆ ಸುಪ್ರೀಂ ಕೋರ್ಟ್ ಗಡುವು: ನೂತನ ಸಿಜೆಐ ಮುಂದೆ ಹಲವು ಕಠಿಣ ಪ್ರಶ್ನೆಗಳನ್ನಿಟ್ಟ ರಾಷ್ಟ್ರಪತಿ ದ್ರೌಪದಿ ಮುರ್ಮು

Photo credit: PTI
ಹೊಸದಿಲ್ಲಿ : ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಮಸೂದೆಗಳಿಗೆ ಒಪ್ಪಿಗೆ ನೀಡುವ ಬಗ್ಗೆ ಸಮಯ ನಿಗದಿ, 142ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್ ಅಸಾಧಾರಣ ಅಧಿಕಾರ ಚಲಾವಣೆ ಸೇರಿದಂತೆ ಹಲವು ಪ್ರಶ್ನೆಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಸುಪ್ರೀಂ ಕೋರ್ಟ್ನ ನೂತನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮುಂದಿಟ್ಟಿದ್ದಾರೆ.
ತಮಿಳುನಾಡು ರಾಜ್ಯಪಾಲರ ಪ್ರಕರಣದಲ್ಲಿ ದ್ವಿಸದಸ್ಯ ಪೀಠ ಹೇಳಿದಂತೆ, ಸುಪ್ರೀಂ ಕೋರ್ಟ್ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಸಮಯಸೂಚಿಯನ್ನು ನಿಗದಿಪಡಿಸಬಹುದೇ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶ್ನಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ಸಂವಿಧಾನದ 143ನೇ ವಿಧಿಯನ್ನು ಬಳಸಿಕೊಂಡು ರಾಷ್ಟ್ರಪತಿ ಮತ್ತು ರಾಜ್ಯಪಾಲರ ಪಾತ್ರಗಳು ಮತ್ತು ಅಧಿಕಾರಗಳಿಗೆ ಸಂಬಂಧಿಸಿ 14 ಪ್ರಮುಖ ಕಾನೂನು ಪ್ರಶ್ನೆಗಳನ್ನು ಮಂದಿಟ್ಟು ಸುಪ್ರೀಂ ಕೋರ್ಟ್ನ ಅಭಿಪ್ರಾಯವನ್ನು ಕೋರಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಳಿದ ಪ್ರಶ್ನೆಗಳಿಗೆ ಅಭಿಪ್ರಾಯ ನೀಡಲು ಭಾರತದ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು ಐದು ಅಥವಾ ಹೆಚ್ಚಿನ ನ್ಯಾಯಾಧೀಶರನ್ನು ಒಳಗೊಂಡ ಸಾಂವಿಧಾನಿಕ ಪೀಠವನ್ನು ರಚಿಸಲಿದ್ದಾರೆ.
ರಾಷ್ಟ್ರಪತಿಗಳು ಸುಪ್ರೀಂ ಕೋರ್ಟ್ ಮುಂದಿಟ್ಟಿರುವ ಕೆಲ ಪ್ರಶ್ನೆಗಳು:
ಸಂವಿಧಾನವು ಸಮಯಸೂಚಿಯನ್ನು ನಿಗದಿಪಡಿಸದಿದ್ದಾಗ ಸುಪ್ರೀಂ ಕೋರ್ಟ್ ಹೇಗೆ ಸಮಯಸೂಚಿಯನ್ನು ನಿಗದಿಪಡಿಸಬಹುದು?
ರಾಷ್ಟ್ರಪತಿ/ರಾಜ್ಯಪಾಲರ ಸಾಂವಿಧಾನಿಕ ಅಧಿಕಾರಗಳನ್ನು ಸುಪ್ರೀಂ ಕೋರ್ಟ್ 142ನೇ ವಿಧಿಯ ಅಡಿಯಲ್ಲಿ ತನ್ನದೇ ಆದ ಅಧಿಕಾರಗಳೊಂದಿಗೆ ಬದಲಾಯಿಸುವುದು ಹೇಗೆ ಸಾಧ್ಯ?
ರಾಜ್ಯ ಸರಕಾರಗಳು ಸುಪ್ರೀಂ ಕೋರ್ಟ್ನ ಪೂರ್ಣ ಅಧಿಕಾರವನ್ನು ಕೇಂದ್ರದ ವಿರುದ್ಧ ದುರುಪಯೋಗಪಡಿಸಿಕೊಳ್ಳುತ್ತಿವೆಯೇ?
ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಕಾಲಮಿತಿಯನ್ನು ಹೇಗೆ ನಿಗದಿಪಡಿಸಬಹುದು?
200ನೇ ವಿಧಿಯ ಅಡಿಯಲ್ಲಿ ರಾಜ್ಯಪಾಲರ ನಿರ್ಧಾರಗಳು ಹೇಗೆ ನ್ಯಾಯಸಮ್ಮತವಾಗಿವೆ? ಎಂದು ರಾಷ್ಟ್ರಪತಿಗಳು ಸುಪ್ರೀಂ ಕೋರ್ಟ್ನಿಂದ ಅಭಿಪ್ರಾಯವನ್ನು ಕೋರಿದ್ದಾರೆ.
ಕಳೆದ ತಿಂಗಳು ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್, ರಾಷ್ಟ್ರಪತಿ ಮತ್ತು ರಾಜ್ಯಪಾಲರಿಬ್ಬರಿಗೂ ಗಡುವು ನಿಗದಿಪಡಿಸಲು 142ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್ ತನ್ನ ಅಸಾಧಾರಣ ಅಧಿಕಾರವನ್ನು ಬಳಸಿಕೊಂಡಿರುವುದನ್ನು ಪ್ರಶ್ನಿಸಿದ್ದರು.
ಎಪ್ರಿಲ್ 12ರಂದು ರಾಜ್ಯಪಾಲರು ಕಾಯ್ದಿರಿಸಿದ ಮಸೂದೆಗಳ ಬಗ್ಗೆ ಮೂರು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. 201ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಗಳ ಅಧಿಕಾರಗಳು ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿವೆ ಎಂದು ಪೀಠವು ಹೇಳಿತ್ತು.







