ರಾಹುಲ್ ಗಾಂಧಿ ಕುರಿತು ಕೃತಿ ಬರೆದಿದ್ದಕ್ಕೆ ಒತ್ತಡ : ನೆಟ್ ವರ್ಕ್ 18ಗೆ ಪತ್ರಕರ್ತ ದಯಾಶಂಕರ್ ರಾಜೀನಾಮೆ

ದಯಾಶಂಕರ್ ಮಿಶ್ರಾ | Photo: @DayashankarMi | X
ಹೊಸದಿಲ್ಲಿ : ಹಿರಿಯ ಡಿಜಿಟಲ್ ಪತ್ರಕರ್ತ ದಯಾಶಂಕರ್ ಮಿಶ್ರಾ ಅವರು ನೆಟ್ವರ್ಕ್ 18ಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ನಾಲ್ಕೂವರೆ ವರ್ಷಗಳಿಗೂ ಹೆಚ್ಚು ಕಾಲ 'ನೆಟ್ವರ್ಕ್ 18' ನ ಡಿಜಿಟಲ್ ಮಾಧ್ಯಮದಲ್ಲಿ ಕಾರ್ಯನಿರ್ವಾಹಕ ಸಂಪಾದಕ ಹುದ್ದೆಯಲ್ಲಿ ಅವರು ಕೆಲಸ ಮಾಡುತ್ತಿದ್ದರು.
ದಯಾಶಂಕರ್ ಮಿಶ್ರಾ ಅವರು ರಾಹುಲ್ ಗಾಂಧಿ ಬಗ್ಗೆ ಬರೆದ ಪುಸ್ತಕ ಡಿಸೆಂಬರ್ನಲ್ಲಿ ಬಿಡುಗಡೆಯಾಗಲಿದೆ. ಆ ಕಾರಣಕ್ಕಾಗಿ ಅವರ ರಾಜೀನಾಮೆ ಚರ್ಚೆಯಲ್ಲಿದೆ. ರಾಜೀನಾಮೆ ನೀಡಿದ ಬಳಿಕ ದಯಾಶಂಕರ್ ಮಿಶ್ರ ಅವರು ಬರೆದಿರುವ ಟಿಪ್ಪಣಿ ಗಮನ ಸೆಳೆಯುತ್ತಿದೆ.
“ರಾಹುಲ್ ಗಾಂಧಿ ಕುರಿತು ಸತ್ಯ ಬರೆಯುವುದರಿಂದ ಯಾವ ಪ್ರಮಾಣದ ಸಮಸ್ಯೆ ಸೃಷ್ಟಿಯಾಗಬಹುದು ಎಂಬ ಅಂದಾಜು ನನಗಿರಲಿಲ್ಲ. ಆಡಳಿತಾರೂಢರ ಬಗ್ಗೆ ಮಹಾಕಾವ್ಯಗಳನ್ನೇ ಬರೆಯಲು ಸ್ಪರ್ಧೆ ಏರ್ಪಟ್ಟಿರುವಾಗ, ಸಾರ್ವಜನಿಕ ನೀತಿ ಚಿಂತಕನ ಚಿಂತನೆ, ದೃಷ್ಟಿಕೋನ ಹಾಗೂ ದೃಢ ನಿರ್ಧಾರವನ್ನು ಕ್ರೋಡೀಕರಿಸಿ ಪ್ರಸ್ತುತ ಪಡಿಸಿದರೆ ಯಾರಾದರೂ ಯಾಕೆ ತಲೆ ಕೆಡಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ, ಅದು ತಪ್ಪು ಎಂದು ಸಾಬೀತಾಯಿತು.
ಬರೆಯುವುದು ಹಾಗೂ ಅಭಿವ್ಯಕ್ತಿಸುವುದು ನಮ್ಮ ಕೆಲಸ. ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಹೃದಯಬಡಿತ ಏರುಪೇರಾಯಿತು. ನನಗೆ ಪುಸ್ತಕವನ್ನು ಮರಳಿ ಪಡೆಯುವ ಆಯ್ಕೆ ನೀಡಲಾಗಿತ್ತು. ನಾನು ಪುಸ್ತಕವನ್ನು ಆಯ್ದುಕೊಂಡೆ. ನಮ್ಮ ಮೂಲ ಕೆಲಸವೇನಿದೆ ಅದನ್ನು ಆಯ್ದುಕೊಂಡೆ. ಸತ್ಯ ಹೇಳುವುದನ್ನು ಆಯ್ದುಕೊಂಡೆ. ಹೀಗಾಗಿ ಮೊದಲು ರಾಜಿನಾಮೆ ನೀಡಿದೆ. ನಂತರ ಪುಸ್ತಕದ ಬಗ್ಗೆ ಯೋಚಿಸಿದೆ.
ಸುದ್ದಿ ಕೋಣೆಯಲ್ಲಿ ಮಾಡಿಕೊಂಡ ಎಲ್ಲ ರಾಜಿಯ ಕಾರಣಕ್ಕೆ ಈ ಪುಸ್ತಕ ಪ್ರಕಟವಾಗಲಿಲ್ಲ. ಬಚ್ಚಿಡಲಾಗಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಈ ಪುಸ್ತಕ ಪ್ರಕಟಣೆ. 2011ರಲ್ಲಿ ರಾಹುಲ್ ಗಾಂಧಿ ವಿರುದ್ಧ ಪ್ರಾರಂಭವಾದ ಸುಳ್ಳು ಪ್ರಚಾರವನ್ನು ಹೊಡೆದು ಹಾಕಿ ನೈಜ ಕತೆ ಮತ್ತು ಗಟ್ಟಿ ದಾಳಿಯನ್ನು ಈ ಪುಸ್ತಕ ಹೊಂದಿದೆ. ಪ್ರಜಾಪ್ರಭುತ್ವದಲ್ಲಿ ಸಾಂಪ್ರದಾಯಿಕ ಹಾಗೂ ವೈಭವಯುತ ವಿರೋಧ ಪಕ್ಷದ ಸ್ಥಾನದಿಂದ ಮಾಧ್ಯಮಗಳು ವಿಮುಖ ಮಾತ್ರ ಆಗಿಲ್ಲ; ಬದಲಿಗೆ ಸರ್ಕಾರದ ಪರ ವಹಿಸಿ, ವಿರೋಧ ಪಕ್ಷಗಳ ವ್ಯಕ್ತಿತ್ವ ಹರಣಕ್ಕೆ ಪ್ರಯತ್ನಿಸಿದವು. ಅರ್ಥಾತ್, ಅವುಗಳಿಂದ ಜನರ ಪ್ರಾತಿನಿಧಿಕ ಧ್ವನಿಯನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದವು. ಮಾಧ್ಯಮಗಳು ಸುದ್ದಿ ಕೋಣೆ ಹಾಗೂ ಸುಳ್ಳು ಪ್ರಚಾರದ ಐಟಿ ಘಟಕದ ನಡುವಿನ ವ್ಯತ್ಯಾಸವನ್ನು ಅಳಿಸಿ ಹಾಕಿದವು. ಅವೆರಡೂ ಒಂದೇ ಎಂಬಂತೆ ಕೆಲಸ ಮಾಡಿದವು ಎಂದು ದಯಾಶಂಕರ್ ಮಿಶ್ರಾ ಹೇಳಿದ್ದಾರೆ.
ಈ ಕೃತಿಯು ಕೋಮುವಾದ, ಸುಳ್ಳು ಪ್ರಚಾರ ಹಾಗೂ ಸರ್ವಾಧಿಕಾರ ವಿರುದ್ಧ ರಾಹುಲ್ ಗಾಂಧಿ ನಡೆಸುತ್ತಿರುವ ಸೆಣಸಾಟದ ವಿಶ್ಲೇಷಣೆಯಾಗಿದೆ. ಓದುಗರು, ಸಾಂವಿಧಾನಿಕ ಸಂಸ್ಥೆಗಳನ್ನು ವಶಪಡಿಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ಹಾಗೂ ಅಣ್ಣಾ ಹಝಾರೆಯೊಂದಿಗೆ ಕೇಜ್ರಿವಾಲ್ ನಡೆಸಿದ ಸುಳ್ಳು ಪ್ರಚಾರದ ರಾಜಕಾರಣವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ. 11 ಅಧ್ಯಾಯಗಳ ಮೂಲಕ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೇಲೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ದಾಳಿಗಳ ಚರಿತ್ರೆಯನ್ನು ಸರಳವಾಗಿ ವಿವರಿಸುವ ಪ್ರಯತ್ನ ಈ ಕೃತಿಯದಾಗಿದೆ. ನೀವು ಈ ಕೃತಿಯಲ್ಲಿ ಹಿಂದುತ್ವ ರಾಜಕಾರಣದಲ್ಲಿ ವೃದ್ಧಿಯಾದ ಗುಂಪು ಹಲ್ಲೆ, ಸುಳ್ಳುಗಳ ಪಾರಮ್ಯ ಹಾಗೂ ಸುಳ್ಳು ಪ್ರಚಾರಗಳು, ರಾಷ್ಟ್ರೀಯವಾದವಾಗುತ್ತಿರುವ ಹಿಂದೂ ಕೋಮುವಾದ, ಪ್ರಜಾಪ್ರಭುತ್ವದಿಂದ ಪ್ರಜಾತಂತ್ರ ಮೌಲ್ಯಗಳ ನಾಶ… ಇವೆಲ್ಲ ಭಾರತದ ಮೇಲಿನ ಗಾಯಗಳಾಗಿದ್ದು, ಈ ಗಾಯಗಳು ಇನ್ನು ಕೆಲವು ಸಮಯದಲ್ಲಿ ಗುಣವಾಗಬಹುದು ಅಥವಾ ಅದಕ್ಕೆ ದಶಕಗಳ ಕಾಲ ಹಿಡಿಯಲೂ ಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಲಿದ್ದೀರಿ” ಎಂದು ಮಿಶ್ರಾ ಬರೆದಿದ್ದಾರೆ.







