Uttar Pradesh | ಮೃತಪಟ್ಟಿದ್ದರು ಎಂದು ನಂಬಲಾದ ವ್ಯಕ್ತಿ 29 ವರ್ಷದ ಬಳಿಕ ಪ್ರತ್ಯಕ್ಷ!

PC | ndtv
ಮುಜಾಫರ್ನಗರ (ಉತ್ತರಪ್ರದೇಶ): ಮೂರು ದಶಕಗಳ ಹಿಂದೆ ಮೃತಪಟ್ಟಿದ್ದಾಗಿ ಕುಟುಂಬ ಸದಸ್ಯರು ನಂಬಿದ್ದ ವೃದ್ಧರೊಬ್ಬರು 29 ವರ್ಷಗಳ ಬಳಿಕ ತಮ್ಮ ಹುಟ್ಟೂರು ಮುಜಾಫರ್ ನಗರ ಜಿಲ್ಲೆಯ ಖಟೂಲಿ ಪಟ್ಟಣದಲ್ಲಿ ಪ್ರತ್ಯಕ್ಷರಾಗಿರುವ ಘಟನೆ ವರದಿಯಾಗಿದೆ.
ಹಲವು ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ನೆಲೆಸಿರುವ ಅವರು ಮತಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಗಾಗಿ ದಾಖಲೆಗಳನ್ನು ಸಂಗ್ರಹಿಸುವ ಸಲುವಾಗಿ ತಮ್ಮ ಮೂಲ ಮನೆಗೆ ಆಗಮಿಸಿದ್ದಾರೆ.
ಷರೀಫ್ ಅಹ್ಮದ್ (79) ಎಂಬ ವ್ಯಕ್ತಿ 1997ರಲ್ಲಿ ನಾಪತ್ತೆಯಾಗಿದ್ದರು. ಮೊದಲ ಪತ್ನಿ ಮೃತಪಟ್ಟ ಬಳಿಕ ಎರಡನೇ ವಿವಾಹವಾಗಿ ಅವರು ಪಶ್ಚಿಮ ಬಂಗಾಳಕ್ಕೆ ತೆರಳಿದ್ದರು. ಇದೀಗ ಎಸ್ಐಆರ್ ಗಾಗಿ ದಾಖಲೆಗಳನ್ನು ಸಂಗ್ರಹಿಸಲು ಡಿಸೆಂಬರ್ 29ರಂದು ಮನೆಗೆ ಮರಳಿದ್ದಾರೆ ಎಂದು ಅಳಿಯ ವಾಸಿಂ ಅಹ್ಮದ್ ಹೇಳಿದ್ದಾರೆ.
"ಹಲವು ವರ್ಷಗಳಿಂದ ಅವರನ್ನು ಪತ್ತೆ ಮಾಡಲು ಪ್ರಯತ್ನಿಸಿದ್ದೆವು. ಪಶ್ಚಿಮ ಬಂಗಾಳಕ್ಕೂ ತೆರಳಿ ಅವರ ಎರಡನೇ ಪತ್ನಿ ನೀಡಿದ ವಿಳಾಸ ಪತ್ತೆ ಮಾಡುವ ಪ್ರಯತ್ನ ಮಾಡಿದೆವು. ಆದರೆ ಎಲ್ಲವೂ ವಿಫಲವಾಯಿತು" ಎಂದು ವಾಸಿಂ ವಿವರಿಸಿದರು. ದಶಕಗಳ ಕಾಲ ಸಂಪರ್ಕವೇ ಇಲ್ಲದಾದಾಗ ಅವರು ಜೀವಂತವಾಗಿ ಉಳಿದಿಲ್ಲ ಎಂಬ ನಿರ್ಧಾರಕ್ಕೆ ನಾಲ್ವರು ಪುತ್ರಿಯರು ಬಂದರು ಎಂದು ಅವರು ಹೇಳಿದರು.
ಮೂಲ ನಿವಾಸದ ದಾಖಲೆಗಳು ಎಸ್ಐಆರ್ಗೆ ಕಡ್ಡಾಯವಾಗಿರುವುದರಿಂದ ಷರೀಫ್ ಅಹ್ಮದ್ ಮೂರು ದಶಕ ಬಳಿಕ ಹುಟ್ಟೂರಿಗೆ ಆಗಮಿಸಿದರು. ಈ ಪುನರ್ಮಿಲನ ಕುಟುಂಬದಲ್ಲಿ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.
ಭೇಟಿಯ ಬಳಿಕ ಅಗತ್ಯ ದಾಖಲೆಗಳೊಂದಿಗೆ ಶರೀಫ್ ಪಶ್ಚಿಮ ಬಂಗಾಳದ ಮೇದಿನಿಪುರ ಜಿಲ್ಲೆಗೆ ಎಸ್ಐಆರ್ ಪರಿಷ್ಕರಣೆ ಪ್ರಕ್ರಿಯೆಗಾಗಿ ಮರಳಿದರು.







