ಶಕ್ತಿ, ಚೈತನ್ಯ, ಇಚ್ಛಾಶಕ್ತಿಯಿಂದಾಗಿ ಮೋದಿ ʼಭಾರತಕ್ಕೆ ಪ್ರಮುಖ ಆಸ್ತಿʼ: ಶಶಿ ತರೂರ್

ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಸದ ಶಶಿ ತರೂರ್ (File Photo: PTI)
ಹೊಸದಿಲ್ಲಿ: ಪಾಕಿಸ್ತಾನದ ಮೇಲಿನ ಭಾರತದ ʼಆಪರೇಷನ್ ಸಿಂಧೂರ್ʼ ಕಾರ್ಯಾಚರಣೆ ಕುರಿತು ಐದು ರಾಷ್ಟ್ರಗಳಿಗೆ ಭೇಟಿ ನೀಡಿ ಮರಳಿರುವ ಹಿರಿಯ ಕಾಂಗ್ರೆಸ್ ಸಂಸದ ಶಶಿ ತರೂರ್, ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಹೊಗಳಿದ್ದಾರೆ.
ʼದಿ ಹಿಂದೂʼ ಪತ್ರಿಕೆಯ ಅಂಕಣದಲ್ಲಿ, ತರೂರ್ ಪ್ರಧಾನಿ ಮೋದಿಯವರನ್ನು ʼಶಕ್ತಿ, ಚೈತನ್ಯ ಮತ್ತು ಇಚ್ಛಾಶಕ್ತಿʼಯಿಂದಾಗಿ ʼಭಾರತಕ್ಕೆ ಪ್ರಮುಖ ಆಸ್ತಿʼ ಎಂದು ಬಣ್ಣಿಸಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿಯವರ ಶಕ್ತಿ, ಚೈತನ್ಯ ಮತ್ತು ತೊಡಗಿಸಿಕೊಳ್ಳುವ ಇಚ್ಛಾಶಕ್ತಿ ಜಾಗತಿಕ ವೇದಿಕೆಯಲ್ಲಿ ಭಾರತಕ್ಕೆ ಪ್ರಮುಖ ಆಸ್ತಿಯಾಗಿ ಉಳಿದಿದೆ" ಎಂದು ತರೂರ್ ಅಂಕಣದಲ್ಲಿ ಬರೆದಿದ್ದಾರೆ, ಈ ಸಂಪರ್ಕವು ಜಾಗತಿಕ ವೇದಿಕೆಯಲ್ಲಿ ಭಾರತದ ಏಕತೆಯನ್ನು ತೋರಿಸಿದೆ ಎಂದು ಒತ್ತಿ ಹೇಳಿದರು.
"ಹೆಚ್ಚು ನ್ಯಾಯಯುತ, ಸುರಕ್ಷಿತ ಮತ್ತು ಸಮೃದ್ಧ ಜಗತ್ತಿಗಾಗಿ ಭಾರತವು ಶ್ರಮಿಸುತ್ತಿರುವುದರಿಂದ, ತಂತ್ರಜ್ಞಾನ (Tech), ವ್ಯಾಪಾರ (Trade) ಮತ್ತು ಸಂಪ್ರದಾಯ (Tradition) ಎಂಬ ಮೂರು 'ಟಿ'ಗಳು ಭಾರತದ ಭವಿಷ್ಯದ ಜಾಗತಿಕ ಕಾರ್ಯತಂತ್ರವನ್ನು ಮುನ್ನಡೆಸಬೇಕು ಎಂದು ಅವರು ಹೇಳಿದ್ದಾರೆ.
ʼಆಪರೇಶನ್ ಸಿಂಧೂರ್ʼ ಕಾರ್ಯಾಚರಣೆಗಾಗಿ ಮೋದಿ ಸರ್ಕಾರವನ್ನು ಶಶಿ ತರೂರ್ ಶ್ಲಾಘಿಸಿದ ಬಳಿಕ ಕಾಂಗ್ರೆಸ್ ಪಕ್ಷದ ಅಸಮಾಧಾನಕ್ಕೆ ತರೂರ್ ಗುರಿಯಾಗಿದ್ದರು.
ʼಆಪರೇಷನ್ ಸಿಂಧೂರ್ʼ ನಂತರ ಪಾಕಿಸ್ತಾನದಲ್ಲಿ ಸಾವುನೋವುಗಳಿಗೆ ಸಂತಾಪ ಸೂಚಿಸುವ ಕೊಲಂಬಿಯಾದ ಆರಂಭಿಕ ನಿಲುವಿನ ಬಗ್ಗೆ ತರೂರ್ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದರು. ತರೂರ್ ಅವರ ಬಲವಾದ ಅಸಮ್ಮತಿಯ ನಂತರ, ಕೊಲಂಬಿಯಾ ರಾಷ್ಟ್ರವು ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡಿತ್ತು.







