ಭಾರತದ ಪ್ರಪ್ರಥಮ ಆಳಸಮುದ್ರ ಟ್ರಾನ್ಸ್ಶಿಪ್ಮೆಂಟರ್ ಬಂದರನ್ನು ದೇಶಕ್ಕೆ ಅರ್ಪಿಸಿದ ಪ್ರಧಾನಿ

ನರೇಂದ್ರ ಮೋದಿ | PTI
ಹೊಸದಿಲ್ಲಿ: ಕೇರಳದ ತಿರುವನಂತಪುರಂ ಸಮೀಪ 8900 ಕೋಟಿ ರೂ. ವೆಚ್ಟದಲ್ಲಿ ನಿರ್ಮಿಸಲಾದ ವಿಳಿಂಜಮ್ ಆಳಸಮುದ್ರ ಬಹುಪಯೋಗಿ ಅಂತಾರಾಷ್ಟ್ರೀಯ ಬಂದರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘‘ ಇಲ್ಲಿ ಒಂದೆಡೆ ಹಲವಾರು ಅವಕಾಶಗಳನ್ನು ತೆರೆದಿಡುವ ಅಗಾಧವಾದ ಸಮುದ್ರವಿದ್ದರೆ, ಇನ್ನೊಂದೆಡೆ ಪ್ರಕೃತಿಯ ಸೌಂದರ್ಯ ನೆಲೆಸಿದೆ. ಇವುಗಳ ನಡುವೆ ಸ್ಥಾಪನೆಯಾಗಿರುವ ‘‘ ವಿಳಿಂಜಂ ಅಂತಾರಾಷ್ಟ್ರೀಯ ಅಳಸಮುದ್ರ ಬಹುಪಯೋಗಿ ಬಂದರು’’ ನವಯುಗದ ಅಭಿವೃದ್ಧಿಯ ಸಂಕೇತವಾಗಿದೆ ಎಂದರು. ವಿಳಂಜಮ್ ಬಂದರು ದೇಶಕ್ಕೆ ಹಾಗೂ ಕೇರಳಕ್ಕ ಆರ್ಥಿಕ ಸ್ಥಿರತೆಯನ್ನು ತರುವ ನಿಟ್ಟಿನಲ್ಲಿ ಇಟ್ಟಂತಹ ಒದು ದೊಡ್ಡ ಹೆಜ್ಜೆಯಾಗಿದೆ ಎಂದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕಾಂಗ್ರೆಸ್ ನಾಯಕ,ಸಂಸದ ಶಶಿಥರೂರ್ , ಉದ್ಯಮಿ ಗೌತಮ್ ಆದಾನಿ ಮತ್ತಿತರರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಧಾನಿಯವರು ವಿಳಿಂಜಮ್ನ ಎರಡನೆ ಹಂತದ ಕಾಮಗಾರಿಗೂ ಚಾಲನೆ ನೀಡಿದರು .
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತನಾಡಿ ಈ ಬೃಹತ್ ಯೋಜನೆಯನ್ನು ದೇಶಕ್ಕೆ ಸಮರ್ಪಿಸಲು ರಾಜ್ಯಕ್ಕೆ ಆಗಮಿಸಿದ್ದಕ್ಕಕಾಗಿ ಕೇರಳದ ಜನತೆಯ ಪರವಾಗಿ ಕೃತಜ್ಞತೆಯನ್ನು ಅರ್ಪಿಸುವುದಾಗಿ ಹೇಳಿದರು. ಅಲ್ಲದೆ ಈ ಯೋಜನೆಯನ್ನು ಉತ್ಕೃಷ್ಟತೆಯೊಂದಿಗೆ ಕಾರ್ಯಗತಗೊಳಿಸಿದ್ದಕ್ಕಾಗಿ ಅದಾನಿ ಸಮೂಹಕ್ಕೂ ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಗೌತಮ್ ಆದಾನಿ ಮಾತನಾಡಿ ಈ ಬಂದರಿನ ನಿರ್ಮಾಣಕ್ಕೆ ಕೇರಳ ಸರಕಾರವು ಸಂಪೂರ್ಣ ಬೆಂಬಲ, ಸಹಕಾರವನ್ನು ನೀಡಿದ್ದಕ್ಕಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಕೃತಜ್ಞತೆ ವ್ಯಕ್ತಪಡಿಸಿದರು.
ವಿಳಿಂಜಮ್ನ ವಿಶೇಷತೆಗಳು:
►‘ಅದಾನಿ ಪೋರ್ಟ್ಸ್ ಹಾಗೂ ಎಸ್ಇಝಡ್ ಲಿಮಿಟೆಡ್’ ಸಂಸ್ಥೆ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಡಿ ನಿರ್ಮಿಸಲಾದ ವಿಳಿಂಜಮ್ ಬಂದರು ಯೋಜನೆಯು ಭಾರತದ ಮೊತ್ತಮೊದಲ ಆಳಸಮುದ್ರ ಟ್ರಾನ್ಸ್ಶಿಪ್ಮೆಂಟ್ (ಹಡಗಿನಿಂದ ಹಡಗಿಗೆ ಸರಕುಗಳ ವರ್ಗಾವಣೆ) ಬಂದರಾಗಿದೆ.
►ಪ್ರಮುಖ ಜಾಗತಿಕ ಹಡಗುಸಂಚಾರ ಮಾರ್ಗಗಳ ಸಮೀಪ ಆಯಕಟ್ಟಿನ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ಬಂದರು ಸೆಮಿ-ಅಟೋಮೇಟೆಡ್ , ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಒಳಗೊಂಡಿದೆ. ಅಲ್ಲದೆ ವಿದೇಶಿ ಬಂದರುಗಳ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆಗೊಳಿಸಲಿದೆ.
►ಈ ಹಿಂದೆ ಭಾರತಕ್ಕೆ ಆಗಮಿಸಿರುವ ಶೇ.75ರಷ್ಟು ಸರಕಗಳು ಸಿಂಗಾಪುರ, ಕೊಲಂಬೊ ಮತ್ತು ದುಬೈನಲ್ಲಿ ಟ್ರಾನ್ಸ್ಶಿಪ್ಮೆಂಟ್ ಆಗುತ್ತಿತ್ತು. ಇದರಿಂದಾಗಿ ವಾರ್ಷಿಕವಾಗಿ ಭಾರತಕ್ಕೆ 220 ಮಿಲಿಯ ಡಾಲರ್ ನಷ್ಟವಾಗುತ್ತಿತ್ತು. ವಿಳಿಂಜಮ್ ಬಂದರು ಹಡಗುಗಳಿಗೆ ಟ್ರಾನ್ಸ್ಶಿಪ್ಮೆಂಟ್ ಸೌಲಭ್ಯವನ್ನು ಒದಗಿಸುವುದರಿಂದ ಆ ನಷ್ಟವು ತಪ್ಪಿಹೋಗಲಿದೆ. ಇದರಿಂದಾಗಿ ಆಮದುದಾರ ಹಾಗೂ ರಫ್ತುದಾರರಿಗೆ ಲಾಭವಾಗಲಿದೆ.
►8900 ಕೋಟಿ ರೂ. ಈ ವೆಚ್ಚದ ಈಯೋಜನೆಯಿಂದ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಅಲ್ಲದೆ ಗೋದಾಮು ವ್ಯವಸ್ಥೆ, ಸಾರಿಗೆ ಹಾಗೂ ಆತಿಥ್ಯ ಉದ್ಯಮಗಳ ಬೆಳವಣಿಗೆಗೆ ಕಾರಣವಾಗಲಿದೆ.
►ವಿಳಿಂಜಂ ಬಂದರಿನ ಸುತ್ತಮುತ್ತಲೂ ಇರುವ ಸಮುದ್ರವು ಸುಮಾರು 1 ಕಿ.ಮೀ. ದೂರದದವೆಗೆ 18-20 ಕಿ.ಮೀ.ನಷ್ಟು ಆಳವಿದೆ. ಇದರಿಂದಾಗಿ ಟ್ಯಾಂಕರ್ಗಳು ಸೇರಿದಂತೆ ಬೃಹತ್ ಗಾತ್ರದ ಇಲ್ಲಿ ಲಂಗರು ಹಾಕಲು ಸಾಧ್ಯವಾಗಲಿದೆ.
►ವಿಳಿಂಜಮ್ನ ಮೊದಲ ಹಂತದ ಯೋಜನೆಯಲ್ಲಿ ನಿರ್ಮಾಣಗೊಂಡಿರುವ ಟರ್ಮಿನಲ್ 2024ರ ಜುಲೈನಲ್ಲಿಯೇ ಕಾರ್ಯಾರಂಭಿಸಿತ್ತು. 280ಕ್ಕೂ ಅಧಿಕ ಕಂಟೇನರ್ ಹಡಗುಗಳನ್ನು ಅದು ಈವರೆಗೆ ನಿರ್ವಹಿಸಿದೆ.ಜಗತ್ತಿನ ಅತಿ ದೊಡ್ಡ ಕಾರ್ಗೊ ಹಡಗುಗಳಲ್ಲೊಂದಾದ ಎಂಎಸ್ಸಿ ಟರ್ಕಿಯೆ ವಿಳಿಂಜಂ ಬಂದರಿನಲ್ಲಿ ಡಾಕ್ ಆಗಿತ್ತು. ಎಂಎಸ್ಸಿ ಟರ್ಕಿಯೆ 400 ಮೀಟರ್ ಉದ್ದ,61 ಮೀಟರ್ ಆಗಲ ಹಾಗೂ 34 ಮೀಟರ್ ಆಳವಿದ್ದು,24,300 ಟಿಇಯುವಿಗೂ ಅಧಿಕ ಪ್ರಮಾಣದ ಸರಕುಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.







