ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಪ್ರಧಾನಿ ಮೋದಿ

ನರೇಂದ್ರ ಮೋದಿ | PTI
ಲಕ್ನೊ: ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು ಗಂಗಾ, ಯಮುನಾ, ಸರಸ್ವತಿಯ ತ್ರಿವೇಣಿ ಸಂಗಮದಲ್ಲಿ ಬುಧವಾರ ಪವಿತ್ರ ಸ್ನಾನ ಮಾಡಿದರು.
ದಿಲ್ಲಿ ವಿಧಾನ ಸಭೆ ಚುನಾವಣೆಯ ಮತದಾನ ನಡೆದ ದಿನವೇ ನರೇಂದ್ರ ಮೋದಿ ಅವರು ಪವಿತ್ರ ಸ್ನಾನ ಮಾಡಲು ಕುಂಭಮೇಳಕ್ಕೆ ಆಗಮಿಸಿದ್ದು, ವೇದ ಮಂತ್ರಗಳ ಪಠಣದ ನಡುವೆ ಅಚಲ ನಂಬಿಕೆ ಹಾಗೂ ಭಕ್ತಿಯಿಂದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು.
ಪವಿತ್ರ ಸ್ನಾನ ಮಾಡುವ ಮುನ್ನ ಅವರು ಸೂರ್ಯನಿಗೆ ಪ್ರಾರ್ಥನೆ ಸಲ್ಲಿಸಿದರು, ರುದ್ರಾಕ್ಷಿ ಮಣಿಗಳನ್ನು ಹಿಡಿದುಕೊಂಡು ಜಪಿಸಿದರು. ಗಂಗಾ, ಯಮುನಾ, ಸರಸ್ವತಿ ನದಿಗಳನ್ನು ಪೂಜಿಸಲು ವಿಧಿ ವಿಧಾನ ನೆರವೇರಿಸಿದರು. ಅನಂತರ ಗಂಗಾ ಪೂಜೆ ಹಾಗೂ ಆರತಿ ನೆರವೇರಿಸಿದರು. ವಸ್ತ್ರಗಳನ್ನು ಸಮರ್ಪಿಸಿದರು.
ಇದಕ್ಕಿಂತ ಮುನ್ನ ಪ್ರಯಾಗ್ರಾಜ್ಗೆ ಆಗಮಿಸಿದ ಮೋದಿ ಅವರನ್ನು ಮುಖ್ಯಮಂತ್ರಿ ಆದಿತ್ಯನಾಥ್ ಸ್ವಾಗತಿಸಿದರು. ಪವಿತ್ರ ಸಂಪ್ರದಾಯವನ್ನು ಪಾಲಿಸಿದ ಮೋದಿ ಸೂರ್ಯನಿಗೆ ತರ್ಪಣ ಹಾಗೂ ಪ್ರಾರ್ಥನೆ ಸಲ್ಲಿಸುವ ಮುನ್ನ ಗೌರವ ಪೂರ್ವಕವಾಗಿ ನದಿಯ ಪವಿತ್ರ ನೀರನ್ನು ಸ್ಪರ್ಶಿಸಿ ಗೌರವಿಸಿದರು.