ಪ್ರಧಾನಿಯಿಂದ ರಾಮಮಂದಿರ ಸ್ಮಾರಕ ಅಂಚೆಚೀಟಿ ಬಿಡುಗಡೆ

ನರೇಂದ್ರ ಮೋದಿ | Photo: PTI
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯ ಶ್ರೀರಾಮ ಮಂದಿರ ಸ್ಮರಣಾರ್ಥ ಅಂಚೆಚೀಟಿಗಳು ಮತ್ತು ವಿಶ್ವಾದ್ಯಂತ ಶ್ರೀರಾಮನ ಕುರಿತು ಹೊರಡಿಸಲಾದ ಅಂಚೆಚೀಟಿಗಳ ಪುಸ್ತಕವನ್ನು ಇಲ್ಲಿ ಗುರುವಾರ ಬಿಡುಗಡೆಗೊಳಿಸಿದರು.
ಅಂಚೆಚೀಟಿಯ ವಿನ್ಯಾಸಗಳಲ್ಲಿ ರಾಮ ಮಂದಿರ,ಚೌಪಾಯಿ ‘ಮಂಗಳ ಭವನ ಅಮಂಗಳ ಹರಿ’,ಸೂರ್ಯ,ಸರಯೂ ನದಿ ಹಾಗೂ ಮಂದಿರದಲ್ಲಿನ ಮತ್ತು ಸುತ್ತುಮುತ್ತಲಿನ ಶಿಲ್ಪಗಳು ಸೇರಿವೆ.
ಇಂದು ಬಿಡುಗಡೆಗೊಂಡ ಅಂಚೆಚೀಟಿಗಳು ರಾಮ ಮಂದಿರ, ಶ್ರೀಗಣೇಶ,ಶ್ರೀಹನುಮಾನ್, ಜಟಾಯು,ಕೇವತ್ರಾಜ್ ಮತ್ತು ಮಾ ಶಬರಿ ಅವರನ್ನು ಒಳಗೊಂಡಿವೆ.
ಅಂಚೆಚೀಟಿಗಳಲ್ಲಿಯ ವಿವಿಧ ವಿನ್ಯಾಸಗಳು ಆಕಾಶ,ವಾಯು,ಭೂಮಿ,ಬೆಂಕಿ ಮತ್ತು ನೀರು ಈ ಪಂಚಮಹಾಭೂತಗಳನ್ನು ಪ್ರತಿಬಿಂಬಿಸುತ್ತಿವೆ.
ಆರು ಸ್ಮರಣಾರ್ಥ ಅಂಚೆಚೀಟಿಗಳ ಕುರಿತು ವೀಡಿಯೊ ಸಂದೇಶದಲ್ಲಿ ಮಾತನಾಡಿರುವ ಮೋದಿ,‘ಇಂದು ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನಾ ಅಭಿಯಾನದಿಂದ ಆಯೋಜಿತ ಇನ್ನೊಂದು ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ನನಗೆ ಲಭಿಸಿದೆ. ಶ್ರೀರಾಮ ಜನ್ಮಭೂಮಿ ಮಂದಿರ ಕುರಿತು ಆರು ಸ್ಮರಣಾರ್ಥ ಅಂಚೆ ಚೀಟಿಗಳು ಮತ್ತು ವಿಶ್ವಾದ್ಯಂತ ಶ್ರೆರಾಮನ ಕುರಿತು ಹೊರಡಿಸಲಾಗಿರುವ ಅಂಚೆಚೀಟಿಗಳ ಪುಸ್ತಕವನ್ನು ಇಂದು ಬಿಡುಗಡೆಗೊಳಿಸಲಾಗಿದೆ. ದೇಶದಲ್ಲಿಯ ಮತ್ತು ವಿಶ್ವಾದ್ಯಂತದ ಎಲ್ಲ ರಾಮಭಕ್ತರಿಗೆ ನನ್ನ ಅಭಿನಂದನೆಗಳು’ ಎಂದು ಹೇಳಿದ್ದಾರೆ.







