ವ್ಲಾದಿಮಿರ್ ಪುತಿನ್ರೊಂದಿಗೆ ಪ್ರಧಾನಿ ಮಾತುಕತೆ | ಉಕ್ರೇನ್ ಭೇಟಿ ಕುರಿತ ಒಳನೋಟ ಹಂಚಿಕೊಂಡ ಮೋದಿ

PC : ANI
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ತನ್ನ ಇತ್ತೀಚೆಗಿನ ಉಕ್ರೇನ್ ಭೇಟಿ ಕುರಿತ ಒಳನೋಟಗಳನ್ನು ಹಂಚಿಕೊಂಡಿದ್ದಾರೆ.
ಉಭಯ ದೇಶಗಳ ನಡುವಿನ ವಿಶೇಷ ಹಾಗೂ ಗೌರವಯುತ ವ್ಯೆಹಾತ್ಮಕ ಪಾಲುದಾರಿಕೆಯನ್ನು ಇನ್ನಷ್ಟು ಸಬಲಗೊಳಿಸುವ ಕ್ರಮಗಳ ಕುರಿತು ಕೂಡ ಇಬ್ಬರು ನಾಯಕರು ಚರ್ಚೆ ನಡೆಸಿದ್ದೇವೆ ಎಂದು ಮೋದಿ ‘ಎಕ್ಸ್’ನ ಪೋಸ್ಟ್ ನಲ್ಲಿ ಹೇಳಿದ್ದಾರೆ.
‘‘ರಶ್ಯ-ಉಕ್ರೇನ್ ಸಂಘರ್ಷದ ದೃಷ್ಟಿಕೋನಗಳನ್ನು ಹಂಚಿಕೊಂಡಿದ್ದೇವೆ. ತನ್ನ ಇತ್ತೀಚೆಗಿನ ಉಕ್ರೇನ್ ಭೇಟಿಯ ಒಳನೋಟಗಳನ್ನು ಕೂಡ ಹಂಚಿಕೊಂಡಿದ್ದೇನೆ. ಈ ಸಂಘರ್ಷಕ್ಕೆ ಆದಷ್ಟು ಬೇಗ ಪರಿಹಾರವನ್ನು ಕಂಡುಕೊಳ್ಳಬೇಕೆಂಬ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ್ದೇನೆ’’ ಎಂದು ಅವರು ಹೇಳಿದ್ದಾರೆ.
ಮೋದಿ ಅವರು ಉಕ್ರೇನ್ ಗೆ ಭೇಟಿ ನೀಡಿರುವ ಕುರಿತು ಅಮೆರಿಕದ ಅಧ್ಯಕ್ಷ ಜೊ ಬೈಡನ್ ಅವರಿಗೆ ಸೋಮವಾರ ವಿವರಿಸಿದ್ದರು. ಅಲ್ಲದೆ, ಈ ವಲಯದಲ್ಲಿ ಮಾತುಕತೆ ಹಾಗೂ ರಾಜತಾಂತ್ರಿಕತೆ ಮೂಲಕ ಆದಷ್ಟು ಬೇಗ ಶಾಂತಿ ಮರಳಿ ತರುವಲ್ಲಿ ಭಾರತ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕೂಡ ತಿಳಿಸಿದ್ದರು.





