2021ರಿಂದ ಪ್ರಧಾನಿಯವರ ವಿದೇಶ ಪ್ರವಾಸಗಳಿಗೆ 300 ಕೋಟಿ ರೂ. ವ್ಯಯಿಸಿದ ಕೇಂದ್ರ

ನರೇಂದ್ರ ಮೋದಿ | PC : PTI
ಹೊಸದಿಲ್ಲಿ: 2021 ಮತ್ತು ಜುಲೈ 2025ರ ನಡುವೆ ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರವಾಸಗಳು ಆತಿಥೇಯ ದೇಶಗಳೊಂದಿಗೆ ಭಾರತದ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಿರಬಹುದು, ಆದರೆ ಅವು ಬೊಕ್ಕಸಕ್ಕೆ ಸುಮಾರು 300 ಕೋಟಿ ರೂ.ಗಳ ವೆಚ್ಚವನ್ನೂ ಉಂಟು ಮಾಡಿವೆ. ಈ ವರ್ಷದ ಫೆಬ್ರವರಿ, ಮಾರ್ಚ್ ಮತ್ತು ಎಪ್ರಿಲ್ನಲ್ಲಿ ಅಮೆರಿಕ, ಫ್ರಾನ್ಸ್, ಮಾರಿಷಸ್, ಥೈಲ್ಯಾಂಡ್, ಶ್ರೀಲಂಕಾ ಮತ್ತು ಸೌದಿ ಅರೇಬಿಯಕ್ಕೆ ಮೋದಿಯವರ ಭೇಟಿಗಳಿಗೆ ಮಾಡಲಾಗಿರುವ 67 ಕೋಟಿ ರೂ.ಗಳ ವೆಚ್ಚವು ಇದರಲ್ಲಿ ಸೇರಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಟಿಎಂಸಿಯ ರಾಜ್ಯಸಭಾ ಸದಸ್ಯ ಡೆರೆಕ್ ಒ’ಬ್ರಿಯೆನ್ ಅವರ ಪ್ರಶ್ನೆಗಳಿಗೆ ನೀಡಿರುವ ಲಿಖಿತ ಉತ್ತರಗಳಲ್ಲಿ ವೆಚ್ಚಗಳ ವಿವರಗಳನ್ನು ಹಂಚಿಕೊಂಡಿದೆ.
2025:
ಫೆ.10 ಮತ್ತು 13ರ ನಡುವೆ ಮೋದಿ ಫ್ರಾನ್ಸ್ ಮತ್ತು ಅಮೆರಿಕಕ್ಕೆ ಭೇಟಿ ನೀಡಿದ್ದರು. ಫ್ರಾನ್ಸ್ ಭೇಟಿಗೆ 25,59,82,902 ರೂ. ಮತ್ತು ಅಮೆರಿಕ ಭೇಟಿಗೆ 16,54,84,302 ರೂ.ಗಳು ವೆಚ್ಚವಾಗಿವೆ.
ಎಪ್ರಿಲ್ 3ರಿಂದ 6ರವರೆಗೆ ಥೈಲ್ಯಾಂಡ್ ಮತ್ತು ಶ್ರೀಲಂಕಾಕ್ಕೆ ನೀಡಿದ ಭೇಟಿಗಳಿಂದ ಒಂಬತ್ತು ಕೋಟಿ ರೂ. ಗೂ ಅಧಿಕ ವೆಚ್ಚವಾಗಿದೆ (ಥೈಲ್ಯಾಂಡ್ 4,92,81,208 ರೂ,ಶ್ರೀಲಂಕಾ 4,46,21,690 ರೂ.). ಎ.22ರಿಂದ 23ರವರೆಗೆ ಸೌದಿ ಅರೇಬಿಯ ಭೇಟಿಗೆ 15,54,03,792.47 ಕೋ.ರೂ.ವೆಚ್ಚ ಮಾಡಲಾಗಿದೆ.
ಪ್ರಧಾನಿ ಮಾರಿಷಸ್(ಮಾ.11-12),ಸೈಪ್ರಸ್, ಕೆನಡಾ ಮತ್ತು ಕ್ರೊಯೇಷಿಯಾ (ಜು.15-19), ಘಾನಾ, ಟ್ರನಿದಾದ್ ಮತ್ತು ಟೊಬಾಗೋ, ಅರ್ಜೆಂಟೀನಾ,ಬ್ರಝಿಲ್ ಮತ್ತು ನಮೀಬಿಯಾ(ಜು.2-9)ಗಳಿಗೂ ಭೇಟಿ ನೀಡಿದ್ದರು. ಆದರೆ ಬಿಲ್ಗಳು ಇನ್ನೂ ಇತ್ಯರ್ಥದ ಹಂತದಲ್ಲಿರುವುದರಿಂದ ವೆಚ್ಚಗಳನ್ನು ಹಂಚಿಕೊಳ್ಳಲಾಗಿಲ್ಲ.
2024
ಮೋದಿ ಫೆ.13ರಿಂದ 15ರವರೆಗೆ ಯುಎಇ ಮತ್ತು ಕತರ್ಗೆ ಭೇಟಿ ನೀಡಿದ್ದರು. ಯುಎಇಗೆ 5,31,95,485 ರೂ. ಮತ್ತು ಕತರ್ ಭೇಟಿಗೆ 3,14,30,607 ರೂ.ಗಳು ವೆಚ್ಚವಾಗಿದ್ದವು. ಮುಂದಿನ ಭೂತಾನ್ ಭೇಟಿಗೆ (ಮಾ.22-23) 4,50,27,271 ರೂ.,ಇಟಲಿ (ಜೂ.13-14) ಭೇಟಿಗೆ 14,36,55,289 ರೂ.,ಆಸ್ಟ್ರಿಯಾ ಮತ್ತು ರಶ್ಯಾ (ಜು.8-10) ಭೇಟಿಗಳಿಗೆ ಅನುಕ್ರಮವಾಗಿ 4,35,35,765 ರೂ.ಮತ್ತು 5,34,71,726 ರೂ.ಗಳು ವೆಚ್ಚವಾಗಿದ್ದವು.
ಆಗಸ್ಟ್ 21 ಮತ್ತು 23ರ ನಡುವೆ ಮೋದಿಯವರ ಪೋಲಂಡ್ ಭೇಟಿಗೆ 10,10,18,686 ರೂ.ಮತ್ತು ಉಕ್ರೇನ್ ಭೇಟಿಗೆ 2,52,01,169 ರೂ.ಗಳನ್ನು ವೆಚ್ಚ ಮಾಡಲಾಗಿದ್ದರೆ,ಸೆ.3 ಮತ್ತು 5ರ ನಡುವೆ ಬ್ರೂನಿ ಭೇಟಿಗೆ 5,0247,410 ರೂ.ಮತ್ತು ಸಿಂಗಾಪುರ ಭೇಟಿಗೆ 7,75,21,329 ರೂ.ಗಳ ವೆಚ್ಚವಾಗಿದೆ.
ಸೆ.21ರಿಂದ 23ರವರೆಗೆ ಅಮೆರಿಕ ಭೇಟಿಗಾಗಿ 15,33,76,348 ರೂ.ಗಳನ್ನು ಮತ್ತು ಅ.10-11ರ ನಡುವೆ ಲಾವೋಸ್ ಭೇಟಿಗೆ 3,00,73,096 ರೂ. ಹಾಗೂ ಅ.22-23ರ ನಡುವೆ ರಶ್ಯಾಭೇಟಿಗೆ 10,74,99,171 ರೂ.ಗಳನ್ನು ವ್ಯಯಿಸಲಾಗಿದೆ.
ನ.16ರಿಂದ 21ರವರೆಗೆ ಪ್ರಧಾನಿಯವರ ನೈಜೀರಿಯಾ ಭೇಟಿಗೆ 4,46,09,640 ರೂ., ಬ್ರೆಝಿಲ್ ಭೇಟಿಗೆ 5,51,86,592 ರೂ.,ಗಯಾನಾ ಭೇಟಿಗೆ 5,4,91,495 ರೂ.ಗಳು ವೆಚ್ಚವಾಗಿವೆ. ಡಿ.22-23ರ ನಡುವೆ ಮೋದಿಯವರ ಕುವೈಟ್ ಭೇಟಿಗೆ ಸರಕಾರವು 2,54,59,263 ರೂ.ಗಳನ್ನು ವ್ಯಯಿಸಿದೆ.
2023ರಲ್ಲಿ ಮೇ 19ರಿಂದ ಡಿ.1ರವರೆಗೆ ಮೋದಿ 11 ದೇಶಗಳಿಗೆ ಆರು ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದರು. ಜಪಾನ್ಗೆ 17,19,33,365 ರೂ.,ಆಸ್ಟ್ರೇಲಿಯಾಕ್ಕೆ 6,06,92,057 ರೂ.,ಅಮೆರಿಕಕ್ಕೆ 22,89,68,509 ರೂ.,ಫ್ರಾನ್ಸ್ಗೆ 13,74,81,530 ರೂ.,ದಕ್ಷಿಣ ಆಫ್ರಿಕಾಕ್ಕೆ 6,11,37,355 ರೂ. ಮತ್ತು ಯುಎಇ ಭೇಟಿಗೆ 4,28,88,197 ರೂ.ಗಳು ವೆಚ್ಚವಾಗಿವೆ.







