ಪ್ರಿಯಾಂಕ್ ಖರ್ಗೆ ಫಸ್ಟ್ ಕ್ಲಾಸ್ ಈಡಿಯೆಟ್: ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ವಾಗ್ದಾಳಿ

ಪ್ರಿಯಾಂಕ್ ಖರ್ಗೆ , ಹಿಮಂತ ಬಿಸ್ವ ಶರ್ಮ | Photo credit : PTI
ಗುವಾಹಟಿ: ಅಸ್ಸಾಂ ಹಾಗೂ ಗುಜರಾತ್ ರಾಜ್ಯಗಳಲ್ಲಿನ ಪ್ರತಿಭಾವಂತರ ಕೊರತೆಯ ಕುರಿತು ಕರ್ನಾಟಕ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಎತ್ತಿದ್ದ ಪ್ರಶ್ನೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ, "ಅವರೊಬ್ಬ ಫಸ್ಟ್ ಕ್ಲಾಸ್ ಈಡಿಯಟ್, ಅವರು ರಾಜ್ಯದ ಯುವಜನತೆ ಹಾಗೂ ವಿದ್ಯಾವಂತರನ್ನು ಅವಮಾನಿಸಿದ್ದಾರೆ" ಎಂದು ವಾಗ್ದಾಳಿ ನಡೆಸಿದ್ದಾರೆ.
ಇದಕ್ಕೂ ಮುನ್ನ, ಸೆಮಿಕಂಡಕ್ಟರ್ ಉದ್ಯಮಿಗಳು ತಮ್ಮ ಹೂಡಿಕೆಗಾಗಿ ಅಸ್ಸಾಂ ಹಾಗೂ ಗುಜರಾತ್ ರಾಜ್ಯಗಳನ್ನು ಆಯ್ಕೆ ಮಾಡಿಕೊಂಡಿರುವುದರ ಹಿಂದಿನ ತರ್ಕವನ್ನು ರವಿವಾರ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದರು.
"ವಾಸ್ತವವಾಗಿ ಬೆಂಗಳೂರಿಗೆ ಬರಬೇಕಾಗಿದ್ದ ಸೆಮಿಕಂಡಕ್ಟರ್ ಉದ್ಯಮಗಳು ಅಸ್ಸಾಂ ಮತ್ತು ಗುಜರಾತ್ಗೆ ಹೋಗುತ್ತಿರುವುದೇಕೆ? ಕರ್ನಾಟಕಕ್ಕೆ ಬರಬೇಕಿದ್ದ ಹೂಡಿಕೆದಾರರ ಕೈಗಳನ್ನು ತಿರುಚಿರುವ ಕೇಂದ್ರ ಸರಕಾರ, ಅವರು ಗುಜರಾತ್ಗೆ ಹೋಗುವಂತೆ ಮಾಡಿದೆ. ಗುಜರಾತಿನಲ್ಲಿ ಏನಿದೆ? ಅಲ್ಲಿ ಪ್ರತಿಭೆ ಇದೆಯೆ? ಅಸ್ಸಾಂನಲ್ಲೇನಿದೆ? ಅಲ್ಲಿ ಪ್ರತಿಭೆ ಇದೆಯೆ?" ಎಂದು ಅವರು ಖಾರವಾಗಿ ಪ್ರಶ್ನಿಸಿದ್ದರು.
ಅವರ ಹೇಳಿಕೆ ಇದೀಗ ರಾಜಕೀಯ ವಿವಾದದ ಕೇಂದ್ರಬಿಂದುವಾಗಿ ಬದಲಾಗಿದೆ.
ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ, ಪ್ರಿಯಾಂಕ್ ಖರ್ಗೆ ಹೇಳಿಕೆ ತೀವ್ರ ಅವಮಾನಕಾರಿ ಹಾಗೂ ಅವಹೇಳನಕಾರಿಯಾಗಿದೆ ಎಂದು ಕಿಡಿ ಕಾರಿದ್ದಾರೆ.
"ಪ್ರಿಯಾಂಕ್ ಖರ್ಗೆ ಒಬ್ಬ ಮಹಾನ್ ಮೂರ್ಖ. ಅವರು ಅಸ್ಸಾಂ ಜನತೆಯನ್ನು ಅವಮಾನಿಸಿದ್ದಾರೆ ಹಾಗೂ ಅವರ ಹೇಳಿಕೆಯನ್ನು ಕಾಂಗ್ರೆಸ್ ಇದುವರೆಗೂ ಖಂಡಿಸಿಲ್ಲ. ಅಸ್ಸಾಂನಲ್ಲಿ ಸ್ಪರ್ಧಾತ್ಮಕ ಯುವಜನತೆ ಇಲ್ಲ ಎಂದು ಅವರು ಹೇಳಿಕೆ ನೀಡಿರುವುದರಿಂದ, ನಾವು ಅವರ ವಿರುದ್ಧ ಪ್ರಕರಣ ದಾಖಲಿಸುವ ಸಾಧ್ಯತೆಯೂ ಇದೆ. ಇದು ಅಸ್ಸಾಂ ಯುವಜನತೆಗೆ ಮಾಡಿರುವ ಅವಮಾನ" ಎಂದು ಹರಿಹಾಯ್ದಿದ್ದಾರೆ.







