‘‘ಒಂದು ದೇಶ, ಒಂದು ಪಕ್ಷ’’ ನೀತಿ ಜಾರಿಗೆ ಸಂವಿಧಾನ ತಿದ್ದುಪಡಿ ಮಸೂದೆ: ಸಂಸದೆ ಪ್ರಿಯಾಂಕಾ ಚುತುರ್ವೇದಿ

ಪ್ರಿಯಾಂಕಾ ಚತುರ್ವೇದಿ | PC : PTI
ಹೊಸದಿಲ್ಲಿ, ಆ. 23: ಜೈಲಿಗೆ ಹೋಗುವ ಮುಖ್ಯಮಂತ್ರಿಗಳು ಮತ್ತು ಇತರ ಚುನಾಯಿತ ಜನಪ್ರತಿನಿಧಿಗಳನ್ನು ಪದಚ್ಯುತಗೊಳಿಸುವ ಉದ್ದೇಶದ ಮಸೂದೆಯು, ‘‘ಒಂದು ದೇಶ, ಒಂದು ಪಕ್ಷ’’ ನೀತಿಯನ್ನು ಜಾರಿಗೊಳಿಸುವ ಬಿಜೆಪಿಯ ವಿಧಾನವಾಗಿದೆ ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ಸಂಸದೆ ಪ್ರಿಯಾಂಕಾ ಚತುರ್ವೇದಿ ಶನಿವಾರ ಹೇಳಿದ್ದಾರೆ.
‘‘ಭ್ರಷ್ಟಾಚಾರ-ಮುಕ್ತ ಭಾರತ’’ ಎನ್ನುವ ಬಿಜೆಪಿಯ 2014ರ ಚುನಾವಣಾ ಭರವಸೆಯು ಪೊಳ್ಳುಮಾತು (ಜುಮ್ಲಾ) ಆಗಿದೆ ಎಂದು ಬಣ್ಣಿಸಿದ ಚತುರ್ವೇದಿ, ಅದನ್ನು ಈಡೇರಿಸಲು ಸರಕಾರ ವಿಫಲವಾಗಿದೆ ಎಂದು ಹೇಳಿದರು.
‘‘ಎಲ್ಲರೂ ರಾಜಕೀಯದಲ್ಲಿ ಸ್ವಚ್ಛತೆಯನ್ನು ಬಯಸುತ್ತಾರೆ ಮತ್ತು ರಾಜಕಾರಣಿಗಳು ಭ್ರಷ್ಟಾಚಾರ ಮಾಡಬಾರದೆಂದು ಆಶಿಸುತ್ತಾರೆ. ಭ್ರಷ್ಟಾಚಾರ ಮುಕ್ತ ಭಾರತವನ್ನು ನಿರ್ಮಿಸುವ ತನ್ನ 2014ರ ಭರವಸೆಯನ್ನು ಈಡೇರಿಸುವಲ್ಲಿ ಸರಕಾರ ವಿಫಲವಾಗಿದೆ. ಸರಕಾರದ ಪ್ರತಿಯೊಂದು ಮಟ್ಟದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ಭರವಸೆಯು ‘ಜುಮ್ಲಾ’ ಎನ್ನುವುದನ್ನು ಇದು ಸಾಬೀತುಪಡಿಸುತ್ತದೆ’’ ಎಂದು ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪ್ರಿಯಾಂಕಾ ಚತುರ್ವೇದಿ ಹೇಳಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ‘ಒಂದು ದೇಶ, ಒಂದು ಪಕ್ಷ’ದ ಬಗ್ಗೆ ಮಾತನಾಡಿದ್ದರು ಎನ್ನುವುದನ್ನು ಸ್ಮರಿಸಿಕೊಂಡ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ನಾಯಕಿ, ನೂತನ ಸಂವಿಧಾನ ತಿದ್ದುಪಡಿಯು ಇದನ್ನು ಸಾಧಿಸುವ ಅವರ ಪಕ್ಷದ ವಿಧಾನವಾಗಿದೆ ಎಂದು ಹೇಳಿದರು.
‘‘ಲೋಕಸಭಾ ಚುನಾವಣೆಯ ವೇಳೆ, ಜೆ.ಪಿ. ನಡ್ಡಾ ‘ಒಂದು ದೇಶ ಒಂದು ಪಕ್ಷ’ದ ಬಗ್ಗೆ ಮಾತನಾಡಿದರು. ಅವರು ಅದನ್ನು ಒಂದೋ ಚುನಾವಣಾ ಆಯೋಗದ ಮೂಲಕ ಅಥವಾ ಇಂಥ ಮಸೂದೆಗಳ ಮೂಲಕ ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಇದು ನಾಚಿಕೆಗೇಡು, ಇದನ್ನು ನಾವು ಜಂಟಿ ಸಂಸದೀಯ ಸಮಿತಿಯಲ್ಲಿ ವಿರೋಧಿಸುತ್ತೇವೆ. ಇದು ಪ್ರಜಾಪ್ರಭುತ್ವ ವಿರೋಧಿಯಾಗಿದೆ’’ ಎಂದು ಅವರು ಹೇಳಿದರು.
ಐದು ವರ್ಷಕ್ಕಿಂತ ಹೆಚ್ಚಿನ ಜೈಲು ಶಿಕ್ಷೆ ಇರುವ ಯಾವುದಾದರೂ ಆರೋಪದಲ್ಲಿ ಪ್ರಧಾನಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಹಾಗೂ ಸಚಿವರು 30 ದಿನಗಳಿಗಿಂತಲೂ ಹೆಚ್ಚು ಕಾಲ ಬಂಧನದಲ್ಲಿದ್ದರೆ, ಅವರನ್ನು ಪದಚ್ಯುತಗೊಳಿಸುವ ಅಧಿಕಾರವನ್ನು ಈ ಸಂವಿಧಾನ ತಿದ್ದುಪಡಿ ಮಸೂದೆಗಳು ಕೇಂದ್ರ ಸರಕಾರಕ್ಕೆ ನೀಡುತ್ತವೆ.







