ಮತಗಳ್ಳತನ | ಚುನಾವಣಾ ಆಯೋಗಕ್ಕೆ ಪ್ರಿಯಾಂಕಾ ಗಾಂಧಿ ತರಾಟೆ

ಪ್ರಿಯಾಂಕಾ ಗಾಂಧಿ | PTI
ಹೊಸದಿಲ್ಲಿ, ಆ. 8: ಮತಗಳ್ಳತನದ ಕುರಿತು ರಾಹುಲ್ ಗಾಂಧಿ ಮಾಡಿರುವ ಆರೋಪದ ಕುರಿತು ತನಿಖೆ ನಡೆಸುವಂತೆ ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.
ಬಿಜೆಪಿಗೆ ಮಾತ್ರ ನಿಷ್ಠೆ ಹೊಂದಿರುವುದಾಗಿ ಚುನಾವಣಾ ಆಯೋಗ ಭಾವಿಸಿದರೆ, ಅದು ತನ್ನ ಚಿಂತನೆಯನ್ನು ಬದಲಾಯಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಸಂಸತ್ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ಚುನಾವಣಾ ಆಯೋಗ ಚುನಾವಣಾ ಅಕ್ರಮಗಳ ಪುರಾವೆಗಳನ್ನು ನಿರ್ಲಕ್ಷಿಸುತ್ತಿದೆ. ಅದರ ಬದಲು ಕಾರ್ಯ ವಿಧಾನದ ಬೇಡಿಕೆಯ ಮೇಲೆ ಗಮನ ಕೇಂದ್ರೀಕರಿಸುತ್ತಿದೆ ಎಂದಿದ್ದಾರೆ.
ರಾಹುಲ್ ಗಾಂಧಿ ಅವರು ಚುನಾವಣೆ ನಡೆಸುವ ನಿಯಮಗಳ ಅಡಿಯಲ್ಲಿ ಘೋಷಣೆಗೆ ಸಹಿ ಹಾಕಬೇಕು ಹಾಗೂ ಮತದಾರರ ಪಟ್ಟಿಯಲ್ಲಿ ತಪ್ಪಾಗಿ ಸೇರಿಸಲಾದ ಅಥವಾ ತೆಗೆದು ಹಾಕಲಾದ ಮತದಾರರ ಹೆಸರನ್ನು ಸಲ್ಲಿಸಬೇಕು ಅಥವಾ ದೇಶದ ಜನರನ್ನು ದಾರಿ ತಪ್ಪಿಸುವುದನ್ನು ಹಾಗೂ ಚುನಾವಣಾ ಆಯೋಗದ ವಿರುದ್ಧ ಆಧಾರ ರಹಿತ ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದು ಚುನಾವಣಾ ಆಯೋಗ ಹೇಳಿದ ಬಳಿಕ ಪ್ರಿಯಾಂಕಾ ಗಾಂಧಿ ವಾದ್ರಾ ಈ ಹೇಳಿಕೆ ನೀಡಿದ್ದಾರೆ
ಈ ವಿಷಯದ ಬಗ್ಗೆ ಕೇಳಿದಾಗ ಪ್ರಿಯಾಂಕಾ ಗಾಂಧಿ ವಾದ್ರಾ, ‘‘ಇದನ್ನು ಅರ್ಥ ಮಾಡಿಕೊಳ್ಳಿ. ಅವರು ಕಾನೂನೊಂದರ ಅಡಿಯಲ್ಲಿ ಅಫಿಡಾವಿಟ್ ಕೇಳುತ್ತಿದ್ದಾರೆ. ಈ ಕಾನೂನಿನ ಪ್ರಕಾರ 30 ದಿನಗಳ ಒಳಗೆ ಅಫಿಡಾವಿಟ್ ಸಲ್ಲಿಸಬೇಕಾಗಿದೆ. ಇಲ್ಲದೇ ಇದ್ದರೆ, ಏನೂ ನಡೆಯುವುದಿಲ್ಲ. ಆದುದರಿಂದ ಅವರು ಅಫಿಡಾವಿಟ್ ಯಾಕೆ ಕೇಳುತ್ತಿದ್ದಾರೆ ? ಇಷ್ಟು ದೊಡ್ಡ ರೀತಿಯಲ್ಲಿ ಈ ಅಕ್ರಮವನ್ನು ಬಹಿರಂಗಪಡಿಸಲಾಗಿದೆ. ಒಂದು ವೇಳೆ ಇದು ಉದ್ದೇಶಪೂರ್ವಕವಲ್ಲದಿದ್ದರೆ, ಇದನ್ನು ತನಿಖೆ ಮಾಡಿ’’ ಎಂದು ಅವರು ಹೇಳಿದ್ದಾರೆ.
ಚುನಾವಣಾ ಆಯೋಗ ಮತದಾರರ ಪಟ್ಟಿಯನ್ನು ಯಂತ್ರ ಓದಬಹುದಾದ ಮಾದರಿಯಲ್ಲಿ ನೀಡುತ್ತಿಲ್ಲ ಯಾಕೆ?, ಅದು ತನಿಖೆ ನಡೆಸುತ್ತಿಲ್ಲ ಯಾಕೆ ? ಎಂದು ಅವರು ಪ್ರಶ್ನಿಸಿದ್ದಾರೆ. ‘‘ಇದರ ಬದಲು ನೀವು ಅಫಿಡಾವಿಟ್ ಗೆ ಸಹಿ ಹಾಕಿ ಎಂದು ಹೇಳುತ್ತಿದ್ದೀರಿ. ಸಂಸತ್ತಿನಲ್ಲಿ ಪ್ರಮಾಣ ಮಾಡುವುದಕ್ಕಿಂತ ದೊಡ್ಡದು ಯಾವುದು? ನಾವು ಪ್ರಮಾಣ ವಚನ ಸ್ವೀಕರಿಸಿದ್ದೇವೆ. ನಾವು ಎಲ್ಲವನ್ನೂ ಬಹಿರಂಗವಾಗಿ ಹೇಳುತ್ತಿದ್ದೇವೆ ಹಾಗೂ ನಿಮಗೆ ಪುರಾವೆಗಳನ್ನು ತೋರಿಸುತ್ತಿದ್ದೇವೆ’’ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹೇಳಿದ್ದಾರೆ.
ರಾಹುಲ್ ಗಾಂಧಿ ಹೇಳಿಕೆಯನ್ನು ಪುನರುಚ್ಛರಿಸಿದ ಅವರು, ವಿಧಾನ ಸಭೆಯಲ್ಲಿ 1 ಲಕ್ಷಕ್ಕೂ ಅಧಿಕ ನಕಲಿ ಮತಗಳು ಕಂಡು ಬಂದಿವೆ. ಅಂದರೆ, ಅವರು ಯಾರಿಗೆ ಮತ ಹಾಕುತ್ತಾರೋ ಅವರು ಜಯ ಗಳಿಸುತ್ತಾರೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.







