'ಆರೆಸ್ಸೆಸ್ ನ ಲೈಂಗಿಕ ದೌರ್ಜನ್ಯ’ದಿಂದ ಟೆಕ್ಕಿ ಆತ್ಮಹತ್ಯೆ ಕುರಿತು ತನಿಖೆಗೆ ಪ್ರಿಯಾಂಕಾ ಗಾಂಧಿ ಆಗ್ರಹ

ಪ್ರಿಯಾಂಕಾ ಗಾಂಧಿ | Photo Credit : PTI
ಹೊಸದಿಲ್ಲಿ,ಅ.13: ಕೇರಳದಲ್ಲಿ ಟೆಕ್ಕಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆಯು ಆರೆಸ್ಸೆಸ್ ನಲ್ಲಿ ಲೈಂಗಿಕ ದೌರ್ಜನ್ಯಗಳ ಆರೋಪಗಳ ಕುರಿತು ತೀವ್ರ ಆಕ್ರೋಶವನ್ನು ಹುಟ್ಟು ಹಾಕಿರುವ ನಡುವೆಯೇ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.
ಐಟಿ ವೃತ್ತಿಪರ ಆನಂದು ಅಜಿ ಅವರು ಆರೆಸ್ಸೆಸ್ ನ ಹಲವಾರು ಸದಸ್ಯರಿಂದ ಪದೇ ಪದೇ ಲೈಂಗಿಕ ದೌರ್ಜನ್ಯವನ್ನು ಆರೋಪಿಸಿ ಸಾಮಾಜಿಕ ಮಾಧ್ಯಮದಲ್ಲಿ ಅಂತಿಮ ಪೋಸ್ಟ್ ನ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ದೌರ್ಜನ್ಯವು ತನ್ನ ಮಾನಸಿಕ ಸ್ವಾಸ್ಥ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಪೋಸ್ಟ್ನಲ್ಲಿ ಹೇಳಿರುವ ಅಜಿ, ತಾನೊಬ್ಬನೇ ಬಲಿಪಶುವಲ್ಲ, ದೇಶಾದ್ಯಂತ ಆರೆಸ್ಸೆಸ್ ಶಿಬಿರಗಳಲ್ಲಿ ಇಂತಹ ಲೈಂಗಿಕ ಕಿರುಕುಳ ಘಟನೆಗಳು ವ್ಯಾಪಕವಾಗಿವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಉತ್ತರದಾಯಿತ್ವಕ್ಕೆ ಆಗ್ರಹಿಸಿದ್ದಾರೆ. ಆರೆಸ್ಸೆಸ್ ನ ಹಲವಾರು ಸದಸ್ಯರು ತನಗೆ ಪದೇ ಪದೇ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅಜಿ ತನ್ನ ಆತ್ಮಹತ್ಯೆ ಸಂದೇಶದಲ್ಲಿ ಆರೋಪಿಸಿದ್ದಾರೆ. ತಾನೋರ್ವನೇ ಸಂತ್ರಸ್ತನಲ್ಲ, ಆರೆಸ್ಸೆಸ್ ಶಿಬಿರಗಳಲ್ಲಿ ವ್ಯಾಪಕ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಅವರ ಮಾತು ನಿಜವಾಗಿದ್ದರೆ ಇದು ಭಯಾನಕವಾಗಿದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.
ಆರೆಸ್ಸೆಸ್ ಶಿಬಿರಗಳಿಗೆ ಹಾಜರಾಗುತ್ತಿರುವ ಲಕ್ಷಾಂತರ ಮಕ್ಕಳು ಮತ್ತು ಹದಿಹರೆಯದವರು ಅಪಾಯದಲ್ಲಿರಬಹುದು ಎಂದು ಎಚ್ಚರಿಸಿರುವ ಪ್ರಿಯಾಂಕಾ, ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮತ್ತು ತಾವು ಶುದ್ಧರು ಎನ್ನುವುದನ್ನು ಸಾಬೀತುಗೊಳಿಸುವಂತೆ ಸಂಘದ ನಾಯಕತ್ವವನ್ನು ಆಗ್ರಹಿಸಿದ್ದಾರೆ. ಹುಡುಗರ ಮೇಲಿನ ಲೈಂಗಿಕ ದೌರ್ಜನ್ಯವು ಹುಡುಗಿಯರ ಮೇಲಿನ ದೌರ್ಜನ್ಯದಷ್ಟೇ ವ್ಯಾಪಕ ಪಿಡುಗು ಆಗಿದೆ. ಹೇಳಲಸಾಧ್ಯವಾದ ಈ ಹೇಯ ಅಪರಾಧಗಳ ಸುತ್ತಲಿನ ಮೌನವನ್ನು ಮುರಿಯಬೇಕಿದೆ ಎಂದೂ ಪ್ರಿಯಾಂಕಾ ಬರೆದಿದ್ದಾರೆ.
ನ್ಯಾಯಕ್ಕಾಗಿ ಪ್ರಿಯಾಂಕಾರ ಆಗ್ರಹವನ್ನು ಪ್ರತಿಧ್ವನಿಸಿರುವ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ವಿ.ಕೆ.ಸನೋಜ್ ಅವರು, ‘ಇದಕ್ಕೆ ಕಾರಣರಾದವರನ್ನು ಕಾನೂನಿನಡಿ ಹೊಣೆಗಾರನ್ನಾಗಿಸುವಂತೆ ನಾವು ಆಗ್ರಹಿಸುತ್ತೇವೆ. ಅಜಿ ಉಲ್ಲೇಖಿಸಿರುವ ಆರೆಸ್ಸೆಸ್ ಶಾಖೆಗಳ ಮುಖ್ಯಸ್ಥರನ್ನು ಬಂಧಿಸಬೇಕು’ ಎಂದು ಹೇಳಿದ್ದಾರೆ.
ಕೇರಳ ಪೋಲಿಸರು ಅಜಿ ಸಾವಿನ ಸುತ್ತಲಿನ ಸಂದರ್ಭಗಳ ಕುರಿತು ವಿಚಾರಣೆ ಆರಂಭಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದೇ ವೇಳೆ ಆರೆಸ್ಸೆಸ್ ಶಿಬಿರಗಳಲ್ಲಿ ಆರೋಪಿತ ದೌರ್ಜನ್ಯಗಳ ಕುರಿತು ವ್ಯಾಪಕ ತನಿಖೆಗೆ ಸಾಮಾಜಿಕ ಮತ್ತು ರಾಜಕೀಯ ಒತ್ತಡಗಳು ಹೆಚ್ಚುತ್ತಿವೆ.







