ಯೂಟ್ಯೂಬ್ ನೋಡಿ ಕೇಂದ್ರ ಸಚಿವ ಗಡ್ಕರಿ ಮಾಡಿದ ಖಾದ್ಯ ಸವಿದ ಪ್ರಿಯಾಂಕಾ ಗಾಂಧಿ

ಪ್ರಿಯಾಂಕಾ ಗಾಂಧಿ , ನಿತಿನ್ ಗಡ್ಕರಿ | Photo Credit : PTI
ಹೊಸದಿಲ್ಲಿ,ಡಿ.18: ಗಡ್ಕರಿಯವರ ಕಚೇರಿಯಲ್ಲಿ ಇಂದು ವಿಶೇಷವೊಂದಿತ್ತು. ಯೂಟ್ಯೂಬ್ ವೀಡಿಯೊಗಳನ್ನು ನೋಡಿ ಅನ್ನದ ಖಾದ್ಯವೊಂದನ್ನು ಗಡ್ಕರಿ ಸ್ವತಃ ತಯಾರಿಸಿದ್ದರು. ಹೀಗಾಗಿ ಇಂದು ಅವರ ಕಚೇರಿಗೆ ಭೇಟಿ ನೀಡಿದ್ದ ಎಲ್ಲರಿಗೂ ಖಾದ್ಯವನ್ನು ಚಟ್ನಿಯೊಂದಿಗೆ ನೀಡಲಾಗಿತ್ತು. ಪ್ರಿಯಾಂಕಾ ಮತ್ತು ಅವರ ಪಕ್ಷದ ಸಹೋದ್ಯೋಗಿ ದೀಪೇಂದರ್ ಹೂಡಾ ಅವರೂ ಗಡ್ಕರಿಯವರೊಂದಿಗೆ ಮಾತನಾಡುತ್ತ ಖಾದ್ಯವನ್ನು ಸವಿದರು.
ಕೇರಳದ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿಯವರನ್ನು ಸಂಸತ್ ಸಂಕೀರ್ಣದಲ್ಲಿಯ ಅವರ ಕಚೇರಿಯಲ್ಲಿ ಭೇಟಿಯಾಗಿ ಕೇರಳದ ಮೂಲಕ ಹಾದು ಹೋಗುವ ಆರು ರಸ್ತೆ ಯೋಜನೆಗಳ ಬಗ್ಗೆ ಚರ್ಚಿಸಿದರು.
ಕೆಲವು ಯೋಜನೆಗಳು ಕೇರಳ ಸರಕಾರದ ಅಡಿಯಲ್ಲಿರುವುದರಿಂದ ಕೇಂದ್ರವು ಅವುಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿದ ಗಡ್ಕರಿ,ಆದರೆ ಉಳಿದ ಯೋಜನೆಗಳನ್ನು ತಾನು ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಒಂದು ಹಂತದಲ್ಲಿ,ಲೋಕಸಭೆಯಲ್ಲಿ ವಿಪಕ್ಷ ನಾಯಕ ಹಾಗೂ ಪ್ರಿಯಾಂಕಾರ ಸೋದರ ರಾಹುಲ್ ಗಾಂಧಿಯವರು ತನ್ನ ಲೋಕಸಭಾ ಕ್ಷೇತ್ರ ರಾಯಬರೇಲಿಯಲ್ಲಿನ ಕೆಲವು ರಸ್ತೆಗಳ ಬಗ್ಗೆ ತನ್ನನ್ನು ಇತ್ತೀಚಿಗೆ ಭೇಟಿಯಾಗಿದ್ದನ್ನು ನೆನಪಿಸಿಕೊಂಡ ಗಡ್ಕರಿ,‘ಭಾಯಿ ಕಾ ಕಾಮ್ ಕರ್ದಿಯಾ, ಬೆಹೆನ್ ಕಾ ನಹೀಂ ಕರೂಂಗಾ ತೋ ಆಪ್ ಬೋಲೆಂಗೆ ನಹಿ ಕಿಯಾ (ಸೋದರನ ಕೆಲಸ ಮಾಡಿದ್ದೀರಿ,ಆದರೆ ನನ್ನ ಕೆಲಸ ಮಾಡಲಿಲ್ಲ ಎಂದು ನೀವು ದೂರುತ್ತೀರಿ)’ ಎಂದು ಹೇಳಿದರು. ಇದು ಪ್ರಿಯಾಂಕಾ ಮತ್ತು ಕೊಠಡಿಯಲ್ಲಿದ್ದ ಇತರರನ್ನು ನಗೆಗಡಲಿನಲ್ಲಿ ತೇಲಿಸಿತ್ತು.
ಕೇರಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಕುರಿತು ವಿಶ್ವಾಸವನ್ನು ವ್ಯಕ್ತಪಡಿಸಿದ ಪ್ರಿಯಾಂಕಾ, ಎಡರಂಗ ಸರಕಾರದ ವ್ಯಾಪ್ತಿಯಲ್ಲಿರುವ ಕೇರಳಕ್ಕೆ ಸಂಬಂಧಿಸಿದ ತನ್ನ ಪ್ರಸ್ತಾವಗಳನ್ನು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಕೈಗೆತ್ತಿಕೊಳ್ಳಲಾಗುವುದು ಎಂದು ಗಡ್ಕರಿಯವರಿಗೆ ತಿಳಿಸಿದರು.







