ಲೋಕಸಭೆಯಲ್ಲಿರಲು ಪ್ರಿಯಾಂಕಾ ಗಾಂಧಿಗೆ ಅರ್ಹತೆ ಇದೆ: ರಾಬರ್ಟ್ ವಾದ್ರಾ

ಪ್ರಿಯಾಂಕಾ ಗಾಂಧಿ , ರಾಬರ್ಟ್ ವಾದ್ರಾ | Photo : PTI
ಹೊಸದಿಲ್ಲಿ: ಲೋಕಸಭೆಯಲ್ಲಿರಲು ತಮ್ಮ ಪತ್ನಿಗೆ ಎಲ್ಲಾ ಅರ್ಹತೆಗಳಿದ್ದು, ಅವರು ಅಲ್ಲಿರಬೇಕು ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಳಿಯ ಹಾಗೂ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಅಭಿಪ್ರಾಯ ಪಟ್ಟಿದ್ದಾರೆ. ಆಕೆಯ ಲೋಕಸಭಾ ಪ್ರವೇಶಕ್ಕೆ ಕಾಂಗ್ರೆಸ್ ಪಕ್ಷ ಯೋಜನೆ ರೂಪಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಈ ಕುರಿತು PTI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ರಾಬರ್ಟ್ ವಾದ್ರಾ, “ಆಕೆ (ಪ್ರಿಯಾಂಕಾ ಗಾಂಧಿ) ಲೋಕಸಭೆಯಲ್ಲಿರಬೇಕು ಎಂದು ನಾನು ಬಯಸುತ್ತೇನೆ. ಆಕೆ ಖಂಡಿತವಾಗಿಯೂ ಲೋಕಸಭೆಯಲ್ಲಿರಬೇಕು. ಅದಕ್ಕಾಗಿ ಆಕೆಯ ಬಳಿ ಎಲ್ಲ ಅರ್ಹತೆಗಳೂ ಇವೆ. ಆಕೆ ಲೋಕಸಭೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲಿದ್ದಾರೆ ಮತ್ತು ಅಲ್ಲಿರಲು ಯೋಗ್ಯವಾಗಿದ್ದಾರೆ. ಈ ಸಂಗತಿಯನ್ನು ಕಾಂಗ್ರೆಸ್ ಪಕ್ಷ ಒಪ್ಪಿಕೊಳ್ಳುತ್ತದೆ ಹಾಗೂ ಆಕೆಯ ಒಳಿತಿಗಾಗಿ ಯೋಜನೆ ರೂಪಿಸುತ್ತದೆ ಎಂದು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.
ಲೋಕಸಭೆಯಲ್ಲಿ ಮಾತನಾಡುವಾಗ ಉದ್ಯಮಿ ಗೌತಮ್ ಅದಾನಿಯೊಂದಿಗೆ ತಮ್ಮ ಹೆಸರನ್ನು ತಳುಕು ಹಾಕಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧವೂ ರಾಬರ್ಟ್ ವಾದ್ರಾ ವಾಗ್ದಾಳಿ ನಡೆಸಿದ್ದಾರೆ. ಅವಿಶ್ವಾಸ ನಿರ್ಣಯ ಕುರಿತ ಚರ್ಚೆಯ ಸಂದರ್ಭದಲ್ಲಿ ಸ್ಮೃತಿ ಇರಾನಿ ಅವರು, ರಾಬರ್ಟ್ ವಾದ್ರಾ, ಉದ್ಯಮಿ ಗೌತಮ್ ಅದಾನಿಯೊಂದಿಗಿರುವ ಚಿತ್ರವನ್ನು ಪ್ರದರ್ಶಿಸಿದ್ದರು.
ನಾನು ರಾಜಕೀಯದಿಂದ ದೂರ ಉಳಿಯಲು ಬಯಸುತ್ತೇನೆ ಎಂದಿರುವ ರಾಬರ್ಟ್ ವಾದ್ರಾ, ಆಡಳಿತಾರೂಢ ಪಕ್ಷವು ನನ್ನ ಹೆಸರನ್ನು ಎಳೆದು ತಂದಾಗ ಮಾತ್ರ ನಾನು ಆ ಕುರಿತು ಚರ್ಚಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. “ನಮ್ಮ ಬಳಿ ಸ್ವತಃ ಪ್ರಧಾನಿಯವರು ಅದಾನಿಯ ವಿಮಾನದಲ್ಲಿ ಕುಳಿತಿರುವ ನಾಲ್ಕು ಚಿತ್ರಗಳಿವೆ. ನಾವೇಕೆ ಈ ಕುರಿತು ಪ್ರಶ್ನಿಸಬಾರದು? ಈ ಕುರಿತು ರಾಹುಲ್ ಗಾಂಧಿ ಪ್ರಶ್ನಿಸುತ್ತಲೇ ಇದ್ದರೂ, ಅವರೇಕೆ ರಾಹುಲ್ ಗಾಂಧಿ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ?” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.







