ಪೋಂಝಿ ಹಗರಣ ಪ್ರಕರಣ: ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಜೆಟ್ ಅನ್ನು ಮುಟ್ಟುಗೋಲು ಹಾಕಿಕೊಂಡ ಈಡಿ

PC : NDTV
ಹೈದರಾಬಾದ್: ಪೋಂಝಿ ಹಗರಣದಲ್ಲಿ ಅಸಂಖ್ಯಾತ ಹೂಡಿಕೆದಾರರಿಗೆ ಸುಮಾರು 850 ಕೋಟಿ ರೂ. ವಂಚಿಸಿದ್ದ ಆರೋಪದ ಮೇಲೆ ಹೈದರಾಬಾದ್ ಮೂಲದ ಕಂಪನಿ ಹಾಗೂ ಅದರ ಪ್ರವರ್ತಕರ ಮೇಲೆ ನಡೆಯುತ್ತಿರುವ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ, ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ವಾಣಿಜ್ಯ ಜೆಟ್ ಒಂದನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಶನಿವಾರ ಮೂಲಗಳು ತಿಳಿಸಿವೆ ಎಂದು ndtv.com ವರದಿ ಮಾಡಿದೆ.
ಫಾಲ್ಕನ್ ಗ್ರೂಪ್ (ಕ್ಯಾಪಿಟಲ್ ಪ್ರೊಟೆಕ್ಷನ್ ಫೋರ್ಸ್ ಪ್ರೈವೇಟ್ ಲಿಮಿಟೆಡ್) ಹಾಗೂ ಅದರ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಅಮರ್ ದೀಪ್ ಕುಮಾರ್ ಹಾಗೂ ಇನ್ನಿತರರ ವಿರುದ್ಧ ಸೈಬರಾಬಾದ್ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದ ಪ್ರಾಥಮಿಕ ಮಾಹಿತಿ ವರದಿಯನ್ನು ಆಧರಿಸಿ ಈ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ.
ವಂಚಕ ಇನ್ವಾಯ್ಸ್ ರಿಯಾಯಿತಿ ಹೂಡಿಕೆ ಯೋಜನೆಯ ಮೂಲಕ ದುಬಾರಿ ಮರುಪಾವತಿ ಮಾಡಲಾಗುವುದು ಎಂದು ಫಾಲ್ಕನ್ ಗ್ರೂಪ್ ಹೂಡಿಕೆದಾರರಿಂದ 1,700 ಕೋಟಿ ರೂ. ಸಂಗ್ರಹಿಸಿತ್ತು ಎಂದು ಈ ಪ್ರಕರಣದಲ್ಲಿ ಆರೋಪಿಸಲಾಗಿದೆ.
ಒಟ್ಟಾರೆ ಸಂಗ್ರಹವಾಗಿದ್ದ ಮೊತ್ತದ ಪೈಕಿ 850 ಕೋಟಿ ರೂ. ಅನ್ನು ಮರುಪಾವತಿಸಲಾಗಿದ್ದು, ಉಳಿದ ಒಟ್ಟು 6,979 ಹೂಡಿಕೆದಾರರಿಗೆ ಮರುಪಾವತಿ ಮಾಡಿಲ್ಲ ಎಂದು ಹೇಳಲಾಗಿದೆ. ನಂತರ ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ಜೆಟ್ ನಲ್ಲಿ ಅಮರ್ ದೀಪ್ ಕುಮಾರ್ ದೇಶದಿಂದ ಪರಾರಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಆರೋಪಗಳ ಕುರಿತು ಕಂಪನಿ ಇನ್ನೂ ತನ್ನ ಪ್ರತಿಕ್ರಿಯೆ ನೀಡಿಲ್ಲ.







