ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ | ಪ್ರೊ. ಫೈಸಲ್ ದೇವ್ಜಿ ಮತ್ತು ಬೀದರ್ ನ ಶಾಹೀನ್ ವಿದ್ಯಾಸಂಸ್ಥೆಯ ಡಾ. ಅಬ್ದುಲ್ ಖದೀರ್ ಅವರಿಗೆ ‘ಸರ್ ಸೈಯದ್ ಎಕ್ಸಲೆನ್ಸ್ ಪ್ರಶಸ್ತಿ’ ಗೌರವ

Photo Credit : Aligarh Muslim University News
ಅಲಿಗಢ, ಅ. 8: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (AMU) 2025ನೇ ಸಾಲಿನ ಸರ್ ಸೈಯದ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ಅಧಿಕೃತವಾಗಿ ಘೋಷಿಸಿದೆ. ವಿಶ್ವವಿದ್ಯಾಲಯದ ಸಂಸ್ಥಾಪಕ ಸರ್ ಸೈಯದ್ ಅಹ್ಮದ್ ಖಾನ್ ಅವರ ಜನ್ಮದಿನದ ಅಂಗವಾಗಿ ಅಕ್ಟೋಬರ್ 17ರಂದು ನಡೆಯಲಿರುವ ಸರ್ ಸೈಯದ್ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.
ಈ ವರ್ಷ ಅಂತರರಾಷ್ಟ್ರೀಯ ಸರ್ ಸೈಯದ್ ಎಕ್ಸಲೆನ್ಸ್ ಪ್ರಶಸ್ತಿಯು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಬಲಿಯೋಲ್ ಕಾಲೇಜಿನ ಖ್ಯಾತ ಇತಿಹಾಸಕಾರ ಪ್ರೊ. ಫೈಸಲ್ ದೇವ್ ಜಿ ಅವರಿಗೆ ಸಂದಿದೆ. ರಾಷ್ಟ್ರೀಯ ಸರ್ ಸೈಯದ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ಬೀದರ್ ನ ಶಾಹೀನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರಿಗೆ ಪ್ರದಾನ ಮಾಡಲಾಗುತ್ತದೆ.
ಪ್ರೊ. ಫೈಸಲ್ ಅವರು ದಕ್ಷಿಣ ಏಷ್ಯಾದ ಅಧ್ಯಯನ, ಇಸ್ಲಾಮಿಕ್ ಚಿಂತನೆ, ಜಾಗತೀಕರಣ ಮತ್ತು ನೀತಿಶಾಸ್ತ್ರದ ಕ್ಷೇತ್ರಗಳಲ್ಲಿ ನೀಡಿದ ವಿಶಿಷ್ಟ ಶೈಕ್ಷಣಿಕ ಮತ್ತು ಸಂಶೋಧನಾ ಕೊಡುಗೆಯನ್ನು ಪರಿಗಣಿಸಿ ಈ ಗೌರವ ಪ್ರಶಸ್ತಿಯನ್ನು ಅವರಿಗೆ ನೀಡಲಾಗುತ್ತದೆ.
ತಾಂಜಾನಿಯಾದಲ್ಲಿ ಜನಿಸಿದ ಪ್ರೊ.ಫೈಸಲ್ ದೇವ್ ಜಿ ಅವರು ಚಿಕಾಗೋ ವಿಶ್ವವಿದ್ಯಾಲಯದಿಂದ ಇಂಟಲೆಕ್ಚುವಲ್ ಹಿಸ್ಟರಿ (ಬೌದ್ಧಿಕ ಇತಿಹಾಸ)ದಲ್ಲಿ ಪಿಎಚ್ಡಿ ಹಾಗೂ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಇತಿಹಾಸ ಮತ್ತು ಮಾನವಶಾಸ್ತ್ರದಲ್ಲಿ ಬಿಎ ಪದವಿ ಪಡೆದಿದ್ದಾರೆ. ಅವರು ಯೇಲ್, ಕಾರ್ನೆಲ್, ಹಾರ್ವರ್ಡ್ ಮತ್ತು ಚಿಕಾಗೋ ವಿಶ್ವವಿದ್ಯಾಲಯಗಳಲ್ಲಿ ಬೋಧಕರಾಗಿಯೂ ಕೆಲಸ ಮಾಡಿದ್ದಾರೆ. Waning Crescent: The Rise and Fall of Global Islam, Muslim Zion: Pakistan as a Political Idea ಹಾಗೂ The Impossible Indian: Gandhi and the Temptation of Violence ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.
ರಾಷ್ಟ್ರೀಯ ಸರ್ ಸೈಯದ್ ಎಕ್ಸಲೆನ್ಸ್ ಪ್ರಶಸ್ತಿ ಸ್ವೀಕರಿಸಲಿರುವ ಬೀದರ್ ನ ಡಾ. ಅಬ್ದುಲ್ ಖದೀರ್ ಅವರು, ಶಾಹೀನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ. 1989ರಲ್ಲಿ ಸ್ಥಾಪಿತವಾದ ಶಾಹೀನ್ ಗ್ರೂಪ್ ಇಂದಿಗೆ ಬೀದರ್ ಸೇರಿದಂತೆ ದೇಶದ 13 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 500ಕ್ಕೂ ಹೆಚ್ಚು ಶಿಕ್ಷಕರು ಮತ್ತು 20,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಸಮಾಜದ ಅಂಚಿನ ಸಮುದಾಯಗಳಲ್ಲಿ ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆ ತರಲು ನೀಡಿದ ಅವರ ಅಮೂಲ್ಯ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ಶಾಹೀನ್ ಸಂಸ್ಥೆಗಳು ಶಾಲೆಗಳು, ಪಿಯು ಮತ್ತು ಪದವಿ ಕಾಲೇಜುಗಳ ಜೊತೆಗೆ ನೀಟ್, ಜೆಇಇ ಹಾಗೂ ಯುಪಿಎಸ್ಸಿ ತರಬೇತಿಗಳನ್ನು ನೀಡುತ್ತಿದೆ. ಅಲ್ಲದೆ ಹಿಫ್ಝ್-ಉಲ್-ಕುರ್ ಆನ್ ಮತ್ತು ಮದರಸಾ ಶಿಕ್ಷಣದೊಂದಿಗೆ ಧಾರ್ಮಿಕ ಮತ್ತು ಆಧುನಿಕ ಶಿಕ್ಷಣ ನೀಡುತ್ತಿದೆ.
ಈ ಪ್ರಶಸ್ತಿಗಳು ಕ್ರಮವಾಗಿ 2 ಲಕ್ಷ ರೂಪಾಯಿ (ಅಂತರರಾಷ್ಟ್ರೀಯ) ಮತ್ತು 1 ಲಕ್ಷ ರೂಪಾಯಿ (ರಾಷ್ಟ್ರೀಯ) ನಗದನ್ನು ಒಳಗೊಂಡಿವೆ. ಸರ್ ಸೈಯದ್ ಅಧ್ಯಯನ, ದಕ್ಷಿಣ ಏಷ್ಯಾ ಅಧ್ಯಯನ, ಉರ್ದು ಸಾಹಿತ್ಯ, ಇತಿಹಾಸ, ಸಾಮಾಜಿಕ ಸುಧಾರಣೆ, ಕೋಮು ಸಾಮರಸ್ಯ ಮತ್ತು ಅಂತರ್ಧರ್ಮ ಸಂವಾದ ಕ್ಷೇತ್ರಗಳಲ್ಲಿ ಅಸಾಧಾರಣ ಕೊಡುಗೆ ನೀಡಿದವರನ್ನು ಗುರುತಿಸುವುದು ಈ ಪ್ರಶಸ್ತಿಯ ಉದ್ದೇಶವಾಗಿದೆ.
ಪ್ರೊ. ಅಝರ್ಮಿ ದುಖ್ತ್ ಸಫಾವಿ ಅವರ ಅಧ್ಯಕ್ಷತೆಯ ತೀರ್ಪುಗಾರರ ಸಮಿತಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ. ಸಮಿತಿಯಲ್ಲಿ ಪ್ರೊ. ಅನೀಸುರ್ ರೆಹಮಾನ್, ಪ್ರೊ. ಎ.ಆರ್. ಕಿದ್ವಾಯಿ, ಪ್ರೊ. ಇಮ್ತಿಯಾಝ್ ಹಸ್ನೈನ್ ಹಾಗೂ ಪ್ರೊ. ಶಫಿ ಕಿದ್ವಾಯಿ ಇದ್ದರು. ಪ್ರಶಸ್ತಿಗೆ ಅಂತಿಮ ಅನುಮೋದನೆಯನ್ನು ವಿವಿಯ ಕುಲಪತಿ ಪ್ರೊ. ನೈಮಾ ಖತೂನ್ ನೀಡಿದ್ದಾರೆ ಎಂದು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕ ಕಚೇರಿಯ ಪ್ರಕಟನೆ ತಿಳಿಸಿದೆ.







