ವೃತ್ತಿ ಅಡುಗೆ ಅನಿಲ ವಿತರಣೆ; ಪ್ರವೃತ್ತಿ ಚುನಾವಣೆಯಲ್ಲಿ ಸ್ಪರ್ಧೆ!

PC:NDTV
ಪಾಟ್ನಾ: ಅಡುಗೆ ಅನಿಲ ವಿತರಿಸುವ ವ್ಯಕ್ತಿ ಮೇಲ್ನೋಟಕ್ಕೆ ರಾಜಕೀಯ ಆಕಾಂಕ್ಷಿ ಎನಿಸಲಾರ; ಆದರೆ ಜನಸೇವೆಯ ಮನೋಭಾವದ ಛೋಟೇಲಾಲ್ ಮಹಾತೊ ಮಾತ್ರ ಕಳೆದ 20 ವರ್ಷಗಳಿಂದ ಪ್ರತಿ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾ ಬಂದಿದ್ದಾರೆ.
ಕಿಶನ್ಗಂಜ್ನಲ್ಲಿ ಅಡುಗೆ ಅನಿಲ ವಿತರಿಸುವ ಮಹತೊ, ಎರಡು ದಶಕಗಳಿಂದ ಸಂಸದ ಅಥವಾ ಶಾಸಕನಾಗಬೇಕು ಎಂಬ ಕನಸು ನನಸುಗೊಳಿಸುವ ನಿಟ್ಟಿನಲ್ಲಿ ಕಣಕ್ಕೆ ಧುಮುಕುತ್ತಿದ್ದಾರೆ. ಹಲವು ಬಾರಿ ಹಿನ್ನಡೆಯಾದರೂ, ಅವರ ಉತ್ಸಾಹ ಮಾತ್ರ ಕುಂದಿಲ್ಲ. ನವೆಂಬರ್ 6 ಮತ್ತು 11ರಂದು ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿ ಮತ್ತೆ ಮಹತೊ ನಾಮಪತ್ರ ಸಲ್ಲಿಸಿದ್ದಾರೆ.
ಪುಟ್ಟ ಮನೆಯಲ್ಲಿ ವಾಸವಿದ್ದು, ಅಡುಗೆ ಅನಿಲ ವಿತರಿಸುವ ಮೂಲಕ ಕುಟುಂಬವನ್ನು ನಿಭಾಯಿಸುವ ಮಹತೊ ತಮ್ಮ ಮೊದಲ ಹಿನ್ನಡೆ ಬಗ್ಗೆ ಪ್ರತಿಕ್ರಿಯಿಸಿ, "2000ನೇ ಇಸ್ವಿಯ ವಿಧಾನಸಭಾ ಚುನಾವಣೆಗೆ ನಾನು 23ನೇ ವಯಸ್ಸಿನಲ್ಲೇ ನಾಮಪತ್ರ ಸಲ್ಲಿಸಿದ್ದೆ. ಆದರೆ ಅದು ವಯಸ್ಸಿನ ಮಾನದಂಡದಿಂದ ತಿರಸ್ಕರಿತವಾಯಿತು" ಎಂದು ನೆನಪಿಸಿಕೊಳ್ಳುತ್ತಾರೆ.
ಬಳಿಕ ನಿರಂತರವಾಗಿ ಪೌರಸಂಸ್ಥೆ ಚುನಾವಣೆ ಸೇರಿದಂತೆ ಹಲವು ಚುನಾವಣೆಗಳಲ್ಲಿ ಅದೃಷ್ಟ ಪರೀಕ್ಷಿಸುತ್ತಾ ಬಂದಿದ್ದಾರೆ. ಸೀಮಾಚಲದ ಗಾಂಧಿ ಎಂದೇ ಪ್ರಖ್ಯಾತರಾಗಿದ್ದ ತಸ್ಲಿಮುದ್ದೀನ್, ಮಾಜಿ ಕೇಂದ್ರ ಸಚಿವ ಸೈಯದ್ ಶಹಾನವಾಜ್ ಹುಸೈನ್ ಅವರಂಥ ದಿಗ್ಗಜರನ್ನು ಚುನಾವಣೆಯಲ್ಲಿ ಎದುರಿಸಿದ ಕೀರ್ತಿ ಇವರದ್ದು.
"2004ರಿಂದೀಚೆಗೆ ಪ್ರತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾ ಬಂದಿದ್ದೇನೆ. ಆದರೆ ಇದುವರೆಗೆ ಗೆದ್ದಿಲ್ಲ. ಹಾಗೆಂದು ಪ್ರಯತ್ನ ಕೈಬಿಟ್ಟಿಲ್ಲ. ಈ ಬಾರಿ ಕೂಡಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದೇನೆ" ಎಂದು ಎನ್ಡಿಟಿವಿ ಜತೆ ಮಾತನಾಡಿದ ಅವರು ಹೇಳಿದರು.
"ನನಗೆ ಸಾರ್ವಜನಿಕ ಬೆಂಬಲ ವ್ಯಾಪಕವಾಗಿ ಇದೆ. ಸ್ಪರ್ಧೆಗೆ ಜನ ನನಗೆ ನೆರವು ನೀಡುತ್ತಾರೆ. ಮನೆಗಳಿಗೆ ನಾನು ಅಡುಗೆ ಅನಿಲ ವಿತರಿಸುತ್ತೇನೆ. ಜನ ನನ್ನಂಥ ನಾಯಕರನ್ನು ಬಯಸಿದ್ದಾರೆ. ಈ ಬಾರಿ ಖಂಡಿತವಾಗಿಯೂ ಗೆಲ್ಲುತ್ತೇನೆ. ತಮ್ಮ ಮತಗಳ ಮೂಲಕ ಜನ ನನ್ನ ಗೆಲುವನ್ನು ಖಾತರಿಪಡಿಸಲಿದ್ದಾರೆ" ಎಂಬ ವಿಶ್ವಾಸ ವ್ಯಕ್ತಪಡಿಸಿದರು.







