Mumbai | ಪ್ರಾಧ್ಯಾಪಕನಿಗೆ ಇರಿದು ಪರಾರಿ: ಹಂತಕನನ್ನು ಪೊಲೀಸರು ಸೆರೆ ಹಿಡಿದಿದ್ದು ಹೇಗೆ?

Photo : ndtv
ಮುಂಬೈ: ಮುಂಬೈ ನಿವಾಸಿಗಳ ಜೀವನಾಡಿಯಾಗಿರುವ ಸ್ಥಳೀಯ ರೈಲ್ವೆಯ ಮಲಾಡ್ ರೈಲ್ವೆ ನಿಲ್ದಾಣದಲ್ಲಿ ಪ್ರಾಧ್ಯಾಪಕರಿಗೆ ಭೀಕರವಾಗಿ ಇರಿದು ಹತ್ಯೆಗೈದ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸುವಲ್ಲಿ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು 27 ವರ್ಷದ ಓಂಕಾರ್ ಶಿಂದೆ ಎಂದು ಗುರುತಿಸಲಾಗಿದೆ.
ಮೃತ ವ್ಯಕ್ತಿಯನ್ನು ಅಲೋಕ್ ಸಿಂಗ್ ಎಂದು ಗುರುತಿಸಲಾಗಿದ್ದು, ಅವರು ವಿಲೆ ಪಾರ್ಲೆಯಲ್ಲಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿದ್ದರು ಎಂದು ತಿಳಿದುಬಂದಿದೆ. ಈ ಘಟನೆ ಮಲಾಡ್ ರೈಲ್ವೆ ನಿಲ್ದಾಣದ 1 ಮತ್ತು 2ನೇ ಪ್ಲಾಟ್ಫಾರ್ಮ್ಗಳ ನಡುವೆ ನಡೆದಿದೆ.
ಈ ಘಟನೆ ಕ್ಷುಲ್ಲಕ ವಾಗ್ವಾದದ ಹಿನ್ನೆಲೆಯಲ್ಲಿ ನಡೆದಿರುವಂತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಶಿಂದೆ ಹಾಗೂ ಮೃತ ಸಿಂಗ್ ಇಬ್ಬರೂ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಮಲಾಡ್ ರೈಲ್ವೆ ನಿಲ್ದಾಣ ಸಮೀಪಿಸುತ್ತಿದ್ದಂತೆಯೇ, ರೈಲಿನಿಂದ ಇಳಿಯುವ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ಪ್ರಾರಂಭವಾಗಿದೆ ಎಂದು ಹೇಳಲಾಗಿದೆ.
ಈ ವಾಕ್ಸಮರ ಭಯಾನಕ ತಿರುವು ಪಡೆದುಕೊಂಡಿದ್ದು, ಸ್ತಿಮಿತ ಕಳೆದುಕೊಂಡ ಶಿಂದೆ ಹರಿತವಾದ ಚಾಕುವನ್ನು ಹೊರತೆಗೆದು ಸಿಂಗ್ ಅವರ ಹೊಟ್ಟೆಗೆ ಹಲವು ಬಾರಿ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಸಿಂಗ್ ಕುಸಿದು ಬಿದ್ದರೆ, ಆರೋಪಿ ಶಿಂದೆ ಪ್ರಯಾಣಿಕರ ದಟ್ಟಣೆಯ ನಡುವೆ ಪರಾರಿಯಾಗಿ ಕಣ್ಮರೆಯಾಗಿದ್ದಾನೆ.
ಬಳಿಕ ಆತನ ಪತ್ತೆಗೆ ತಕ್ಷಣವೇ ತನಿಖೆಗೆ ಚಾಲನೆ ನೀಡಿದ ಬೊರಿವಿಲಿ ರೈಲ್ವೆ ಪೊಲೀಸರು, ನಿಲ್ದಾಣದ ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ ಹಲ್ಲೆಯ ನಂತರ ಪಾದಚಾರಿ ಸೇತುವೆಯ ಮೇಲೆ ಪರಾರಿಯಾಗುತ್ತಿದ್ದ ಬಿಳಿ ಶರ್ಟ್ ಹಾಗೂ ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದ ಶಿಂದೆಯನ್ನು ಗುರುತಿಸಿದ್ದಾರೆ.
ವೀಡಿಯೊ ಸಾಕ್ಷ್ಯ ಹಾಗೂ ತಾಂತ್ರಿಕ ಸುಳಿವುಗಳ ಆಧಾರದಲ್ಲಿ ವಸಾಯಿಯಲ್ಲಿ ಶಿಂದೆಯನ್ನು ಪತ್ತೆ ಹಚ್ಚಿದ ಪೊಲೀಸರು, ಆತನನ್ನು ಬಂಧಿಸಿದ್ದಾರೆ.
ಆದರೆ ಕೇವಲ ವಾಗ್ವಾದದ ಕಾರಣಕ್ಕೆ ಅಪರಿಚಿತ ವ್ಯಕ್ತಿಯೊಬ್ಬನನ್ನು ಇರಿದು ಹತ್ಯೆಗೈಯುವುದು ಅಸಹಜ ಘಟನೆ. ಇದರ ಹಿಂದೆ ಇನ್ನೂ ಆಳವಾದ ವ್ಯಾಜ್ಯ ಇರುವ ಸಾಧ್ಯತೆ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.







