ಹಲಾಲ್ ಉತ್ಪನ್ನಗಳ ಲಾಭವನ್ನು ಭಯೋತ್ಪಾದನೆ, ʼಲವ್ ಜಿಹಾದ್ʼ ಗೆ ಬಳಸಲಾಗುತ್ತಿದೆ : ವಿವಾದಾತ್ಮಕ ಹೇಳಿಕೆ ನೀಡಿದ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್

ಉತ್ತರಪ್ರದೇಶ ಸಿಎಂ ಆದಿತ್ಯನಾಥ್ (Photo: PTI)
ಲಕ್ನೋ : ಉತ್ತರ ಪ್ರದೇಶ ಹಲಾಲ್ ಉತ್ಪನ್ನಗಳ ಮಾರಾಟ ನಿಷೇಧಿಸಿದೆ. ಇದರ ಮಾರಾಟದಿಂದ ಬರುವ ಲಾಭವನ್ನು ಭಯೋತ್ಪಾದನೆ, ಬಲವಂತದ ಮತಾಂತರ ಮತ್ತು ʼಲವ್ ಜಿಹಾದ್ʼಗೆ ಹಣಕಾಸು ಒದಗಿಸಲು ಬಳಸಲಾಗುತ್ತಿದೆ ಎಂದು ಉತ್ತರಪ್ರದೇಶ ಸಿಎಂ ಆದಿತ್ಯನಾಥ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಆರೆಸ್ಸೆಸ್ ಶತಮಾನೋತ್ಸವದ ಅಂಗವಾಗಿ ಗೋರಖ್ಪುರದಲ್ಲಿ ನಡೆದ 'ವಿಚಾರ್-ಪರಿವಾರ್ ಕುಟುಂಬ್ ಸ್ನೇಹ್ ಮಿಲನ್' ಮತ್ತು 'ದೀಪೋತ್ಸವ್ ಸೇ ರಾಷ್ಟ್ರೋತ್ಸವ್' ಕಾರ್ಯಕ್ರಮದಲ್ಲಿ ಮಾತನಾಡಿದ ಆದಿತ್ಯನಾಥ್, ನೀವು ಏನನ್ನಾದರೂ ಖರೀದಿಸುತ್ತಿದ್ದರೆ ಅದಕ್ಕೆ ಹಲಾಲ್ ಪ್ರಮಾಣೀಕರಣ ಟ್ಯಾಗ್ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ಯಾರೂ ಅಂತಹ ಉತ್ಪನ್ನಗಳನ್ನು ಮಾರಾಟ ಮಾಡಲು ಧೈರ್ಯ ಮಾಡುವುದಿಲ್ಲ, ಸೋಪುಗಳು, ಬಟ್ಟೆಗಳು, ಬೆಂಕಿಪೊಟ್ಟಣಗಳು ಸೇರಿದಂತೆ ಹಲವಾರು ಉತ್ಪನ್ನಗಳು ಈಗ ಹಲಾಲ್ ಪ್ರಮಾಣೀಕರಣದ ಅಡಿಯಲ್ಲಿ ಬರುತ್ತಿದೆ. ಹಲಾಲ್ ಪ್ರಮಾಣೀಕರಣಕ್ಕೆ ಅಧಿಕೃತ ಮಾನ್ಯತೆ ಇಲ್ಲದಿದ್ದರೂ ಅದನ್ನು ಬಳಸಿಕೊಂಡು 25,000 ಕೋಟಿ ರೂ. ಗಳಿಸಲಾಗಿದೆ. ಈ ಎಲ್ಲಾ ಹಣವನ್ನು ಭಾರತದಲ್ಲಿ ಭಯೋತ್ಪಾದನೆ, ಲವ್ ಜಿಹಾದ್ ಮತ್ತು ಮತಾಂತರಕ್ಕೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆದಿತ್ಯನಾಥ್ ಹೇಳಿದರು.
ಛತ್ರಪತಿ ಶಿವಾಜಿ ಮಹಾರಾಜ್, ಗುರು ಗೋವಿಂದ ಸಿಂಗ್, ಮಹಾರಾಣಾ ಪ್ರತಾಪ್ ಮತ್ತು ಮಹಾರಾಣಾ ಸಂಗ ಅವರನ್ನು ಹೆಸರಿಸುತ್ತಾ ನಮ್ಮ ಪೂರ್ವಜರು ʼಇಸ್ಲಾಂ ರಾಜಕೀಯʼ ವಿರುದ್ಧ ಹೋರಾಟಗಳನ್ನು ನಡೆಸಿದರು. ಆದರೆ ಇತಿಹಾಸ ಈ ಅಂಶವನ್ನು ಹೆಚ್ಚಾಗಿ ಕಡೆಗಣಿಸಿದೆ ಎಂದು ಹೇಳಿದರು.







