ಅಮೆರಿಕ: ಭಾರತೀಯ ಮೂಲದ ಖ್ಯಾತ ದಲಿತ ಹೋರಾಟಗಾರ ಮಿಲಿಂದ್ ಮಕ್ವಾನ ಹೃದಯಾಘಾತದಿಂದ ನಿಧನ

ಮಿಲಿಂದ್ ಮಕ್ವಾನ (PTI)
ಕ್ಯಾಲಿಫೋರ್ನಿಯಾ: ಕ್ಯಾಲಿಫೋರ್ನಿಯಾ ವಿಧಾನಸಭೆಯಲ್ಲಿ ಇತ್ತೀಚೆಗೆ ಮಂಡಿಸಲಾಗಿದ್ದ ಜಾತಿ ತಾರತಮ್ಯ ಕುರಿತಾದ ಮಸೂದೆಯನ್ನು ಖಂಡಿಸಿದ್ದ ಖ್ಯಾತ ಭಾರತೀಯ-ಅಮೆರಿಕನ್ ದಲಿತ ಹೋರಾಟಗಾರ ಮಿಲಿಂದ್ ಮಕ್ವಾನ ಅವರು ಕುಪರ್ಟಿನೋ ಎಂಬಲ್ಲಿನ ನಗರಸಭೆ ಸಭೆಯಲ್ಲಿ ಈ ಮಸೂದೆ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ನಡುವೆಯೇ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಜುಲೈ 18ರಂದು ನಡೆದ ಕುಪರ್ಟಿನೋ ನಗರಸಭೆಯಲ್ಲಿಈ ಮಸೂದೆ ಕುರಿತು ಮಾತನಾಡಿ ಅದು ದಲಿತ ವಿರೋಧಿ ಎಂದು ಆರೋಪಿಸಿದ್ದರು. ನಂತರ ಸಭೆಯಲ್ಲಿಯೇ ಅವರು ಕುಸಿದು ಬಿದ್ದರು. ಮಿಲಿಂದ್ ಅವರು ಸೇವಾ ಇಂಟರ್ನ್ಯಾಷನಲ್ ಯುಎಸ್ಎ ಇದರ ಸಕ್ರಿಯ ಕಾರ್ಯಕರ್ತರಾಗಿಯೂ ಸೇವೆ ಸಲ್ಲಿಸಿದ್ದರು.
ಈ ಸಂಸ್ಥೆಯ ಕಾರ್ಯಕರ್ತನಾಗಿ ಅವರು 2015ರಲ್ಲಿ ತಮಿಳುನಾಡಿಗೆ ಆಗಮಿಸಿ ನೆರೆಪೀಡಿತರ ಸಹಾಯಕ್ಕೆ ಮುಂದಾಗಿದ್ದರು. ಕ್ಯಾಲಿಫೋರ್ನಿಯಾ ಬೇ ಏರಿಯಾ ಸೇವಾ ಘಟಕದ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಅವರು ಭಾಗವಹಿಸುತ್ತಿದ್ದರು.
ಅಂಬೇಡ್ಕರ್-ಫುಳೆ ನೆಟ್ವರ್ಕ್ ಆಫ್ ಅಮೆರಿಕನ್ ದಲಿತ್ಸ್ ಎಂಡ್ ಬಹುಜನ್ಸ್ ಇದರ ಸದಸ್ಯರೂ ಆಗಿದ್ದ ಮಿಲಿಂದ್, ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ ಹಾಗೂ ಮಕ್ಕಳಿಗಾಗಿ ಸೃಜನಾತ್ಮಕ ಗೇಮ್ಸ್ ಕೂಡ ಸೃಷ್ಟಿಸಿದ್ದರು.





