ಉತ್ತರಾಖಂಡದಲ್ಲಿ ವಿದ್ಯಾರ್ಥಿ ಏಂಜೆಲ್ ಚಕ್ಮಾ ಹತ್ಯೆ: ತ್ರಿಪುರಾದಲ್ಲಿ ಪ್ರತಿಭಟನೆ

Screengrab: X/ANI
ಅಗರ್ತಲಾ: ಉತ್ತರಾಖಂಡದಲ್ಲಿ ವಿದ್ಯಾರ್ಥಿ ಏಂಜೆಲ್ ಚಕ್ಮಾ ಹತ್ಯೆಯನ್ನು ಖಂಡಿಸಿ ತ್ರಿಪುರದಲ್ಲಿ ರವಿವಾರ ಪ್ರತಿಭಟನೆ ನಡೆಯಿತು. ತ್ರಿಪುರ ಚಕ್ಮಾ ಸ್ಟೂಡೆಂಟ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ದೇಶದ ವಿವಿಧ ಭಾಗಗಳಲ್ಲಿ ಈಶಾನ್ಯ ರಾಜ್ಯಗಳ ಯುವಕರ ಮೇಲೆ ನಡೆಯುತ್ತಿರುವ ಹಲ್ಲೆ ಹಾಗೂ ಕಿರುಕುಳಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು. ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಪ್ರತಿನಿಧಿಗಳು, ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ನಲ್ಲಿ ಗಂಭೀರವಾಗಿ ಹಲ್ಲೆಗೀಡಾಗಿ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟ ವಿದ್ಯಾರ್ಥಿ ಏಂಜೆಲ್ ಚಕ್ಮಾ ಹತ್ಯೆ ಪ್ರಕರಣದತ್ತ ಗಮನ ಸೆಳೆದರು. ದೇಶಾದ್ಯಂತ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಿಂಸಾಚಾರ ಮತ್ತು ಅವಹೇಳನಕಾರಿ ವರ್ತನೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.
ಈಶಾನ್ಯ ರಾಜ್ಯಗಳ ಜನರನ್ನು ಗುರಿಯಾಗಿಸಿಕೊಂಡು ನಡೆಯುವ ದ್ವೇಷಾಪರಾಧಗಳು ಹಾಗೂ ಅವಮಾನಕಾರಿ ಹೇಳಿಕೆಗಳನ್ನು ತಡೆಯಲು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ತುರ್ತು ಮತ್ತು ಪರಿಣಾಮಕಾರಿ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಸಂಘಟನೆಯ ನಾಯಕರು ಒತ್ತಾಯಿಸಿದರು.
ಈ ನಡುವೆ, ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ದೂರವಾಣಿ ಕರೆ ಮಾಡಿ, ಪ್ರಕರಣದ ಕುರಿತು ಚರ್ಚಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಮೃತ ವಿದ್ಯಾರ್ಥಿಗೆ ನ್ಯಾಯ ಒದಗಿಸಲಾಗುವುದು ಎಂದು ಉತ್ತರಾಖಂಡ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಮಾಣಿಕ್ ಸಹಾ ತಿಳಿಸಿದ್ದಾರೆ.







