ಧಾರ್ಮಿಕ ಸ್ಥಳಗಳ ರಕ್ಷಣೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿ ; ಮಣಿಪುರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ
ಸುಪ್ರೀಂ ಕೋರ್ಟ್ | Photo: PTI
ಹೊಸದಿಲ್ಲಿ: ಮಣಿಪುರದಲ್ಲಿರುವ ಆರಾಧನಾ ಸ್ಥಳಗಳ ರಕ್ಷಣೆಗೆ ತೆಗೆದುಕೊಳ್ಳಲಾಗಿರುವ ಕ್ರಮಗಳ ಬಗ್ಗೆ ನ್ಯಾಯಾಲಯದಿಂದ ನೇಮಕಗೊಂಡಿರುವ ಸಮಿತಿಯೊಂದಕ್ಕೆ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ರಾಜ್ಯ ಸರಕಾರಕ್ಕೆ ಸೂಚಿಸಿದೆ.
ಸಂಘರ್ಷಪೀಡಿತ ಮಣಿಪುರದಲ್ಲಿ ತೆಗೆದುಕೊಳ್ಳಲಾಗಿರುವ ಪರಿಹಾರ ಮತ್ತು ಪುನರ್ವಸತಿ ಕ್ರಮಗಳ ಬಗ್ಗೆ ನ್ಯಾಯಮೂರ್ತಿ ಗೀತಾ ಮಿತ್ತಲ್ ನೇತೃತ್ವದಲ್ಲಿ ಮೂವರು ಮಾಜಿ ಹೈಕೋರ್ಟ್ ನ್ಯಾಯಾಧೀಶರ ಸಮಿತಿಯೊಂದನ್ನು ಸುಪ್ರೀಂ ಕೋರ್ಟ್ ಆಗಸ್ಟ್ನಲ್ಲಿ ರಚಿಸಿತ್ತು.
ಮಣಿಪುರದಲ್ಲಿ ಮೇ 3ರಿಂದ ಕುಕಿ ಮತ್ತು ಮೆತೈ ಸಮುದಾಯದ ಸದಸ್ಯರ ನಡುವೆ ಜನಾಂಗೀಯ ಕಲಹ ನಡೆಯುತ್ತಿದೆ. ಈ ಹಿಂಸಾಚಾರದಲ್ಲಿ ಈಗಾಗಲೇ ಸುಮಾರು 175 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠವೊಂದು ಮೆತೈ ಕ್ರಿಶ್ಚಿಯನ್ ಚರ್ಚಸ್ ಕೌನ್ಸಿಲ್ ಸಲ್ಲಿಸಿದ ಅರ್ಜಿಯೊಂದರ ವಿಚಾರಣೆ ನಡೆಸುತ್ತಿತ್ತು. ಆರಾಧನಾ ಸ್ಥಳಗಳ ಪುನರ್ನಿರ್ಮಾಣಕ್ಕೆ ನ್ಯಾಯಾಲಯ ನೇಮಿತ ಸಮಿತಿಯು ಕೆಲವೊಂದು ಶಿಫಾರಸುಗಳನ್ನು ಮಾಡಿತ್ತು ಎಂದು ಮೆತೈ ಕ್ರಿಶ್ಚಿಯನ್ ಚರ್ಚಸ್ ಕೌನ್ಸಿಲ್ ತನ್ನ ಅರ್ಜಿಯಲ್ಲಿ ಹೇಳಿದೆ. ಎಲ್ಲಾ ಸಮುದಾಯಗಳಿಗೆ ಸೇರಿದ ಆರಾಧನ ಸ್ಥಳಗಳನ್ನು ಪುನರ್ನಿರ್ಮಿಸಬೇಕೆಂದು ಕೌನ್ಸಿಲ್ ಸ್ಪಷ್ಟಪಡಿಸಿದೆ ಎಂದು ಕೌನ್ಸಿಲ್ ಪರವಾಗಿ ಹಾಜರಾದ ವಕೀಲ ಹುಝೇಫ ಅಹ್ಮದಿ ಹೇಳಿದರು.
ಪರಿಹಾರ ಶಿಬಿರಗಳಲ್ಲಿರುವ ಎಲ್ಲರೂ ಕ್ರಿಸ್ಮಸ್ ಹಬ್ಬ ಆಚರಿಸಲು ಸಾಧ್ಯವಾಗುವಂತೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸರಕಾರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಸಂದರ್ಭದಲ್ಲಿ ಘೋಷಿಸಿದರು.
ಧಾರ್ಮಿಕ ಸ್ಥಳಗಳನ್ನು ಅತಿಕ್ರಮಣ ಹಾಗೂ ಹಾನಿ ಅಥವಾ ವಿನಾಶದಿಂದ ರಕ್ಷಿಸಬೇಕು ಎಂದು ಹೈಕೋರ್ಟ್ ನ ಮೂವರು ಮಾಜಿ ನ್ಯಾಯಾಧೀಶರ ಸಮಿತಿಯು ಸೆಪ್ಟಂಬರ್ ನಲ್ಲಿ ಹೇಳಿತ್ತು. ನಿರ್ವಸಿತ ಜನರ ಸೊತ್ತುಗಳನ್ನು ಹಾಗೂ ಹಿಂಸಾಚಾರದ ವೇಳೆ ಧ್ವಂಸಗೊಂಡಿರುವ ಅಥವಾ ಸುಟ್ಟುಹೋಗಿರುವ ಸೊತ್ತುಗಳನ್ನು ರಕ್ಷಿಸುವಂತೆ ಮತ್ತು ಅವುಗಳ ಅತಿಕ್ರಮಣವನ್ನು ತಡೆಯುವಂತೆಯೂ ಸಮಿತಿಯು ಮಣಿಪುರ ಸರಕಾರಕ್ಕೆ ಕರೆ ನೀಡಿತ್ತು.