ರಾಮಮಂದಿರ ಬಗ್ಗೆ ಪ್ರಚೋದನಕಾರಿ ಪೋಸ್ಟ್: ಜಮ್ಮುವಿನಲ್ಲಿ ಇಬ್ಬರ ಬಂಧನ

ಅಯೋಧ್ಯೆ | Photo : PTI
ಹೊಸದಿಲ್ಲಿ : ಅಯೋಧ್ಯೆಯಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ನೂತನ ರಾಮಮಂದಿರದ ಬಗ್ಗೆ ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆಂಬ ಆರೋಪದಲ್ಲಿ ಇಬ್ಬರು ವ್ಯಕ್ತಿಗಳನ್ನು ಜಮ್ಮುಕಾಶ್ಮೀರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ವಿಷಯಗಳನ್ನು ಅಪ್ಲೋಡ್ ಮಾಡಿದ ಆರೋಪದಲ್ಲಿ ಜಮ್ಮವಿಭಾಗದ ರಿಯಾಸಿ, ರಾಮಬನ್, ರಜೌರಿ, ಕಥುವಾದಲ್ಲಿ ಒಟ್ಟು ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ..
ಬಂಧಿತ ಆರೋಪಿಗಳಲ್ಲಿ ಒಬ್ಬನನ್ನು ಜಮ್ಮು ಜಿಲ್ಲೆಯ ಖನ್ನಾ ಚಾರ್ಗಲ್ ಗ್ರಾಮದ ನಿವಾಸಿ ಝಾಫರ್ ಹುಸೈನ್ ಎಂದು ಗುರುತಿಸಲಾಗಿದೆ. ಈ ಮಧ್ಯೆ ಶಾಂತಿ ಹಾಗೂ ಸೌಹಾರ್ದತೆಯನ್ನು ಕದಡುವ ಯಾವುದೇ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡದಂತೆ ರಿಯಾಸಿ ಜಿಲ್ಲಾ ಪೊಲೀಸರು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.
‘ ಎಲ್ಲಾ ಸಾಮಾಜಿಕ ಜಾಲತಾಣ ವೇದಿಕೆಗಳನ್ನು ಕಣ್ಗಾವಲಿನಲ್ಲಿರಿಸಲಾಗಿದೆ ಹಾಗೂ ಎಲ್ಲಾ ಪೋಸ್ಟ್ ಗಳು, ಪ್ರತಿಕ್ರಿಯೆಗಳನ್ನು ಕಣ್ಗಾವಲಿನಲ್ಲಿರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಚೋದನಕಾರಿ ಹಾಗೂ ದ್ವೇಷವನ್ನು ಹರಡುವಂತಹ ಯಾವುದೇ ಪೋಸ್ಟ್ ಗಳನ್ನು ಪ್ರಸಾರ ಮಾಡುವ ವ್ಯಕ್ತಿಯ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.







