ಪಿಎಸ್ಜಿಐಸಿ, ನಾಬಾರ್ಡ್ ಉದ್ಯೋಗಿಗಳ ವೇತನ ಏರಿಕೆ, ಪಿಂಚಣಿ ಪರಿಷ್ಕರಣೆಗೆ ಕೇಂದ್ರದ ಅಸ್ತು

ಸಾಂದರ್ಭಿಕ ಚಿತ್ರ | Photo Credit : freepik
ಹೊಸದಿಲ್ಲಿ, ಜ.23: ದೀರ್ಘಾವಧಿಯಿಂದ ಬಾಕಿಯಿರುವ ಸಾರ್ವಜನಿಕ ರಂಗದ ಜನರಲ್ ಇನ್ಶೂರೆನ್ಸ್ ಕಂಪೆನಿಗಳು (ಪಿಎಸ್ಜಿಐಸಿ) ಹಾಗೂ ಕೃಷಿ,ಗ್ರಾಮೀಣ ಅಭಿವೃದ್ಧಿಗಾಗಿನ ರಾಷ್ಟ್ರೀಯ ಬ್ಯಾಂಕ್ (ನಾಬಾರ್ಡ್) ಉದ್ಯೋಗಿಗಳ ವೇತನ ಪರಿಷ್ಕರಣೆಗೆ ಕೇಂದ್ರ ಸರಕಾರ ಶುಕ್ರವಾರ ಅನುಮೋದನೆ ನೀಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹಾಗೂ ನಾಬಾರ್ಡ್ನ ನಿವೃತ್ತ ಉದ್ಯೋಗಿಗಳ ಪಿಂಚಣಿ ಪರಿಷ್ಕರಣೆಯನ್ನು ಮಂಜೂರು ಮಾಡಿದೆ. ಸುಮಾರು 46,332 ಉದ್ಯೋಗಿಗಳು, 23,570 ಪಿಂಚಣಿದಾರರು ಹಾಗೂ 23,260 ಕುಟುಂಬ ಪಿಂಚಣಿದಾರರು ಇದರ ಪ್ರಯೋಜನ ಪಡೆಯಲಿದ್ದಾರೆ.
ಈ ನಡೆಯು ಸೇವಾವಧಿಯಲ್ಲಿ ಪಿಂಚಣಿದಾರರ ಸುದೀರ್ಘ ಹಾಗೂ ಸಮರ್ಪಿತ ಸೇವೆಯನ್ನು ಪರಿಗಣನೆಗೆ ತೆಗೆದುಕೊಂಡು ಅವರ ಆರ್ಥಿಕ ಕ್ಷೇಮ ಹಾಗೂ ಸಾಮಾಜಿಕ ಭದ್ರತೆಗೆ ರಾಜ್ಯ ಸರಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ.
ಪಿಎಸ್ಜಿಐಸಿಗಳ ವೇತನ ಹಾಗೂ ಪಿಂಚಣಿ ಪರಿಷ್ಕರಣೆಗೆ ಅನುಮೋದನೆ
2022ರ ಆಗಸ್ಟ್ 1ರಿಂದ ಅನ್ವಯವಾಗುವಂತೆ ಸಾರ್ವಜನಿಕರಂಗದ ವಿಮಾ ಕಂಪೆನಿಗಳ ಉದ್ಯೋಗಿಗಳ ವೇತನ ಪರಿಷ್ಕರಣೆಯಾಗಲಿದೆ. ಇದರಿಂದಾಗಿ ಮೂಲವೇತನ, ತುಟ್ಟಿಭತ್ತೆಯಲ್ಲಿ ಶೇ.14 ಹೆಚ್ಚಳ ಸೇರಿದಂತೆ ಒಟ್ಟಾರೆ ವೇತನದಲ್ಲಿ 12.41 ಶೇ.ಏರಿಕೆಯಾಗಲಿದೆ. 43,247 ಉದ್ಯೋಗಿಗಳು ಪ್ರಯೋಜನ ಪಡೆಯಲಿದ್ದಾರೆ.
2010ರ ಎಪ್ರಿಲ್ 1ರ ಆನಂತರ ಸೇರ್ಪಡೆಗೊಂಡ ಸಿಬ್ಬಂದಿಗಾಗಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ ಉದ್ಯೋಗದಾತರ ಕೊಡುಗೆಯನ್ನು ಶೇ.10ರಿಂದ ಶೇ.14ಕ್ಕೆ ಏರಿಸಲಾಗಿದೆ. ಕುಟುಂಬ ಪಿಂಚಣಿಯನ್ನು ಏಕರೂಪವಾಗಿ ಶೇ.30ರಷ್ಟು ಪರಿಷ್ಕರಿಸಲಾಗಿದೆ. ಇದರಿಂದಾಗಿ 14,615 ಮಂದಿ ಕುಟುಂಬ ಪಿಂಚಣಿದಾರರು ಪಡೆಯಲಿದ್ದಾರೆ. ಕೇಂದ್ರದ ಬೊಕ್ಕಸಕ್ಕೆ 8,170 ಕೋಟಿ ರೂ. ಹೊರೆ ಬೀಳಲಿದೆ.
ನಾಬಾರ್ಡ್ ಉದ್ಯೋಗಿಗಳ ವೇತನ, ಭತ್ತೆಯಲ್ಲಿ ಶೇ.20 ಹೆಚ್ಚಳ
ನಾಬಾರ್ಡ್ನ ಗ್ರೂಪ್ ಎ, ಬಿ ಮತ್ತು ಸಿ ಉದ್ಯೋಗಿಗಳ ವೇತನ ಹಾಗೂ ಭತ್ತೆಗಳಲ್ಲಿ ಶೇ.20ರಷ್ಟು ಏರಿಕೆಯನ್ನು ಮಾಡಲಾಗಿದ್ದು, 3800 ಮಂದಿ ಸೇವಾ ನಿರತರು ಹಾಗೂ ಮಾಜಿ ಸಿಬ್ಬಂದಿಗೆ ಪ್ರಯೋಜನವಾಗಲಿದೆ.
ಪಿಂಚಣಿ ಪರಿಷ್ಕರಣೆಯಿಂದಾಗಿ ನಿವೃತ್ತರ ಮೂಲ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯು ಮಾಜಿ ಆರ್ಬಿಐ-ನಬಾರ್ಡ್ ನಿವೃತ್ತರಿಗೆ ಸರಿಸಮವಾಗಲಿದೆ.
ಭಾರತೀಯ ರಿಸರ್ವ್ ಬ್ಯಾಂಕ್ನ ನಿವೃತ್ತರ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯನ್ನು ಪರಿಷ್ಕರಿಸಲಾಗಿದೆ. ಕುಟುಂಬ ಪಿಂಚಣಿಯನ್ನು ಮೂಲ ಪಿಂಚಣಿ ಹಾಗೂ ತುಟ್ಟಿಭತ್ತೆ ಪರಿಹಾರದ ಮೇಲಿನ ಶೇ.10ರಷ್ಟು ಏರಿಕೆ ಮಾಡಲಾಗಿದೆ. 2022ರ ನವೆಂಬರ್ 1ರಿಂದ ಅನ್ವಯವಾಗುವಂತೆ ಇದು ಜಾರಿಗೆ ಬರಲಿದೆ. 22,580 ಪಿಂಚಣಿದಾರರು ಹಾಗೂ 8189 ಕುಟುಂಬ ಪಿಂಚಣಿದಾರರು ಸೇರಿದಂತೆ ಒಟ್ಟು 30,769 ಮಂದಿ ಪ್ರಯೋಜನ ಪಡೆಯಲಿದ್ದಾರೆ.
ಎಲ್ಲರನ್ನೂ ಒಳಗೊಂಡ ಹಾಗೂ ಸುಸ್ಥಿರವಾದ ಆರ್ಥಿಕ ಬೆಳವಣಿಗೆಗೆ ಆಧಾರವಾಗಿರುವ ಸಂಸ್ಥೆಗಳನ್ನು ಬಲಪಡಿಸುವ ಬದ್ಧತೆಯನ್ನು ತಾನು ಹೊಂದಿರುವುದಾಗಿ ಕೇಂದ್ರ ಸರಕಾರದ ಹೇಳಿಕೆ ತಿಳಿಸಿದೆ.







