ಈ ವರ್ಷ ಸರಕಾರಿ ಸ್ವಾಮ್ಯದ ಬ್ಯಾಂಕ್ಗಳಲ್ಲಿ 50,000 ಸಿಬ್ಬಂದಿ ನೇಮಕಾತಿ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಬ್ಯಾಂಕುಗಳು ತಮ್ಮ ಬೆಳೆಯುತ್ತಿರುವ ವ್ಯವಹಾರ ಅಗತ್ಯ ಮತ್ತು ವಿಸ್ತರಣೆಗಾಗಿ ಪ್ರಸಕ್ತ ವಿತ್ತವರ್ಷದಲ್ಲಿ ಸುಮಾರು 50,000 ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಿವೆ.
ವಿವಿಧ ಬ್ಯಾಂಕ್ಗಳಿಂದ ಸಂಗ್ರಹಿಸಲಾದ ಮಾಹಿತಿಗಳ ಪ್ರಕಾರ ಹೊಸ ನೇಮಕಾತಿಗಳಲ್ಲಿ ಸುಮಾರು 21,000 ಅಧಿಕಾರಿಗಳ ಹುದ್ದೆಗಳಾಗಿದ್ದು, ಉಳಿದ ನೇಮಕಾತಿಗಳು ಗುಮಾಸ್ತ ಹಾಗೂ ಇತರ ಹುದ್ದೆಗಳಾಗಿವೆ.
12 ಸರಕಾರಿ ಬ್ಯಾಂಕುಗಳಲ್ಲಿ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್ಬಿಐ ಪ್ರಸಕ್ತ ಹಣಕಾಸು ವರ್ಷದಲ್ಲಿ ವಿಶೇಷ ಅಧಿಕಾರಿಗಳು ಸೇರಿದಂತೆ ಸುಮಾರು 20,000 ಜನರನ್ನು ನೇಮಕ ಮಾಡಿಕೊಳ್ಳಲಿದೆ.
ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿರುವ ಎಸ್ಬಿಐ ದೇಶಾದ್ಯಂತ ತನ್ನ ಶಾಖೆಗಳಲ್ಲಿ ತನ್ನ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಈಗಾಗಲೇ 505 ಪ್ರೊಬೇಷನರಿ ಅಧಿಕಾರಿಗಳು ಮತ್ತು 13,455 ಜ್ಯೂನಿಯರ್ ಅಸೋಸಿಯೇಟ್ಗಳನ್ನು ನೇಮಕ ಮಾಡಿಕೊಂಡಿದೆ.
35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದು 13,455 ಜ್ಯೂನಿಯರ್ ಅಸೋಸಿಯೇಟ್ಗಳ ನೇಮಕಾತಿಯ ಉದ್ದೇಶವಾಗಿದೆ. ಮಾರ್ಚ್ 2025ರ ವೇಳೆಗೆ ಎಸ್ಬಿಐ 1,15,066 ಅಧಿಕಾರಿಗಳು ಸೇರಿದಂತೆ ಒಟ್ಟು 2,36,226 ಉದ್ಯೋಗಿಗಳನ್ನು ಹೊಂದಿತ್ತು.
2024-25ನೇ ಸಾಲಿಗೆ ಪ್ರತಿ ಪೂರ್ಣಕಾಲಿಕ ಉದ್ಯೋಗಿಗೆ ಸರಾಸರಿ ನೇಮಕಾತಿ ವೆಚ್ಚ 40,440.59 ರೂ.ಆಗಿತ್ತು.
ದೇಶದ ಎರಡನೇ ಅತಿ ದೊಡ್ಡ ಸರಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಪಿಎನ್ಬಿ ಪ್ರಸಕ್ತ ವಿತ್ತವರ್ಷದಲ್ಲಿ 5,500ಕ್ಕೂ ಅಧಿಕ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಉದ್ದೆಶಿಸಿದೆ. ಮಾರ್ಚ್ 2025ರ ವೇಳೆಗೆ ಬ್ಯಾಂಕು ಒಟ್ಟು 1,02,746 ಉದ್ಯೋಗಿಗಳನ್ನು ಹೊಂದಿತ್ತು.
ಇನ್ನೊಂದು ಸರಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸುಮಾರು 4,000 ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲು ಉದ್ದೇಶಿಸಿದೆ.