ಪಶ್ಚಿಮ ಏಷ್ಯಾ ಸಂಘರ್ಷದಿಂದ ಅನಿಲ ಪೂರೈಕೆಗೆ ಅಡ್ಡಿ : ಪುಣೆಯ ಅನಿಲ ಚಿತಾಗಾರ ಸ್ಥಗಿತ

ಸಾಂದರ್ಭಿಕ ಚಿತ್ರ | Photo Credit : PTI
ಮುಂಬೈ, ಮಾ. 9: ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಉಂಟಾದ ಇಂಧನ ಪೂರೈಕೆ ಬಿಕ್ಕಟ್ಟು ಪುಣೆಯ ಅತಿ ದೊಡ್ಡ ಚಿತಾಗಾರಗಳಲ್ಲಿ ಒಂದಾದ ವೈಕುಂಠ ಧಾಮದ ಮೇಲೂ ಪರಿಣಾಮ ಬೀರಿದೆ.
ಇಂಧನ ಪೂರೈಕೆ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪುಣೆ ಮಹಾನಗರ ಪಾಲಿಕೆ ಅನಿಲ ಬಳಸಿ ಅಂತ್ಯಕ್ರಿಯೆ ನಡೆಸುವ ಸೌಲಭ್ಯಗಳಿಗೆ ಅನಿಲ ಸರಬರಾಜನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಇದು ಎಲ್ಪಿಜಿ ಆಧಾರಿತ ಚಿತಾಗಾರಗಳನ್ನು ಮುಚ್ಚಲು ಕಾರಣವಾಗಿದೆ. ಆದರೆ, ವಿದ್ಯುತ್ ಆಧಾರಿತ ಹಾಗೂ ಸಾಂಪ್ರದಾಯಿಕ ಕಟ್ಟಿಗೆಯ ಚಿತಾಗಾರಗಳು ಕಾರ್ಯ ನಿರ್ವಹಿಸುತ್ತಿವೆ.
ಎಲ್ಪಿಜಿಯಲ್ಲಿರುವ ಪ್ರೊಪೇನ್ ಹಾಗೂ ಬ್ಯುಟೇನ್ ಅನ್ನು ದೇಶದಲ್ಲಿ ಮಿತವಾಗಿ ಬಳಸಲಾಗುತ್ತದೆ. ಪ್ರೊಪೇನ್ ಹಾಗೂ ಬ್ಯುಟೇನ್ ಅನ್ನು ದೇಶಾದ್ಯಂತ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಪೂರೈಕೆಗೆ ಆದ್ಯತೆ ಮೇರೆಗೆ ಬಳಸುವಂತೆ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಯ ಆದೇಶ ಹೊರಡಿಸಿದೆ ಎಂದು ಪುಣೆ ಮಹಾನಗರ ಪಾಲಿಕೆ ತಿಳಿಸಿದೆ.
ಪುಣೆಯ ನವಿ ಪೇಠ್ ಪ್ರದೇಶದಲ್ಲಿ ಸುಮಾರು 17 ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿರುವ ವೈಕುಂಠ ಧಾಮದಲ್ಲಿ ಪ್ರತಿದಿನ 20 ಶವಗಳ ಸಂಸ್ಕಾರ ಮಾಡಲಾಗುತ್ತದೆ. ಅಲ್ಲದೆ, ಇದು ನಗರದ ಅತಿದೊಡ್ಡ ಚಿತಾಗಾರಗಳಲ್ಲಿ ಒಂದು.
ವಿದ್ಯುತ್ ಚಿತಾಗಾರ ಹಾಗೂ ಕಟ್ಟಿಗೆ ಆಧಾರಿತ ಚಿತಾಗಾರಗಳು ಯಾವುದೇ ತೊಂದರೆಗಳಿಲ್ಲದೆ ಕಾರ್ಯ ನಿರ್ವಹಿಸುತ್ತಿವೆ ಎಂದು ಪುಣೆ ಮಹಾನಗರ ಪಾಲಿಕೆ ತಿಳಿಸಿದೆ.







