ಪುಣೆ ಬಸ್ಸಿನಲ್ಲಿ ಅತ್ಯಾಚಾರ ಪ್ರಕರಣ: ನೀರು, ಆಹಾರಕ್ಕೆ ಮನವಿ ಮಾಡಿ ಪೊಲೀಸರಿಗೆ ಸೆರೆ ಸಿಕ್ಕ ಆರೋಪಿ
ಗದ್ದೆಯಲ್ಲಿ ಅವಿತುಕೊಂಡಿದ್ದ ದತ್ತಾತ್ರೇಯ ರಾಮದಾಸ್ ಗಾಡೆ

ದತ್ತಾತ್ರೇಯ ರಾಮದಾಸ್ ಗಾಡೆ (Photoಛ NDTV)
ಪುಣೆ: ಶಿರೂರು ತಾಲ್ಲೂಕಿನ ತನ್ನ ಸ್ವಗ್ರಾಮವಾದ ಗುನತ್ ನ ಗದ್ದೆಯೊಂದರಲ್ಲಿ ಅವಿತುಕೊಂಡಿದ್ದ 37 ವರ್ಷದ ಪುಣೆ ಅತ್ಯಾಚಾರ ಪ್ರಕರಣದ ಆರೋಪಿ ದತ್ತಾತ್ರೇಯ ರಾಮದಾಸ್ ಗಾಡೆ, ನೀರು, ಆಹಾರಕ್ಕಾಗಿ ಮಾಡಿದ ಮನವಿಯಿಂದ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಮುಂಜಾನೆ ಸ್ವರ್ಗತೆ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದ 26 ವರ್ಷದ ಮಹಿಳೆಯೊಬ್ಬರನ್ನು ಬಲವಂತವಾಗಿ ಖಾಲಿಯಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನೊಳಗೆ ಕರೆದೊಯ್ದು ಅತ್ಯಾಚಾರವೆಸಗಿದ್ದ ಆರೋಪಿ ದತ್ತಾತ್ರೇಯ ರಾಮದಾಸ್ ಗಾಡೆ, ನಂತರ ಅಲ್ಲಿಂದ ಶಿರೂರ್ ತಾಲ್ಲೂಕಿನಲ್ಲಿರುವ ತನ್ನ ಸ್ವಗ್ರಾಮಕ್ಕೆ ಪರಾರಿಯಾಗಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಯ ಪತ್ತೆಗೆ ವ್ಯಾಪಕ ಶೋಧ ಕಾರ್ಯ ಕೈಗೊಂಡಿದ್ದರು. ತನ್ನ ಸ್ವಗ್ರಾಮ ಗುನತ್ ನ ಗದ್ದೆಯೊಂದರಲ್ಲಿ ಅವಿತುಕೊಂಡಿದ್ದ ದತ್ತಾತ್ರೇಯ ರಾಮದಾಸ್ ಗಾಡೆಯನ್ನು ಪತ್ತೆ ಹಚ್ಚಲು ಪೊಲೀಸರು ಶ್ವಾನದಳ ಹಾಗೂ ಡ್ರೋನ್ ಗಳನ್ನು ಬಳಸಿದ್ದರು. ಗುರುವಾರ ಮಧ್ಯರಾತ್ರಿಯ ವೇಳೆಗೆ ಆತನನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆಯ ನಂತರ, ತನ್ನ ಮೊಬೈಲ್ ಫೋನ್ ಅನ್ನು ಸ್ವಿಚ್ಡ್ ಆಫ್ ಮಾಡಿದ್ದ ಆರೋಪಿ, ತನ್ನ ಸ್ವಗ್ರಾಮಕ್ಕೆ ಪರಾರಿಯಾಗಿದ್ದ. ಆತನ ಬೆನ್ನು ಹತ್ತಿದ ಪೊಲೀಸರು, ಆತನ ಸ್ವಗ್ರಾಮವನ್ನು ತಲುಪಿದಾಗ, ಆತ ಮನೆಯೊಂದಕ್ಕೆ ಭೇಟಿ ನೀಡಿ, ನೀರಿಗಾಗಿ ಮನವಿ ಮಾಡಿರುವುದು ಪತ್ತೆಯಾಗಿದೆ.
ಆರೋಪಿಯನ್ನು ಸೆರೆ ಹಿಡಿಯಲು ಪೊಲೀಸರು ಗುರುವಾರ ಡ್ರೋನ್ ಗಳು ಹಾಗೂ ಶ್ವಾನ ದಳವನ್ನು ಗುನತ್ ಗ್ರಾಮದಲ್ಲಿ ನಿಯೋಜಿಸಿದ್ದರು. ಈ ಶೋಧ ಕಾರ್ಯಾಚರಣೆಯಲ್ಲಿ 13 ತಂಡಗಳು ಭಾಗಿಯಾಗಿದ್ದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಕಬ್ಬಿನ ಗದ್ದೆಯಲ್ಲಿ ನಡೆಸಲಾಗುತ್ತಿದ್ದ ಡ್ರೋನ್ ಹಾಗೂ ಶ್ವಾನ ದಳ ಶೋಧ ಕಾರ್ಯಾಚರಣೆಯನ್ನು ರಾತ್ರಿ ಸ್ಥಗಿತಗೊಳಿಸಲಾಯಿತು. ಆದರೆ, ಆಹಾರಕ್ಕಾಗಿ ಗಾಡೆ ಮನೆಯೊಂದಕ್ಕೆ ಭೇಟಿ ನೀಡಿರುವ ಮಾಹಿತಿಯನ್ನು ನಾವು ಸ್ವೀಕರಿಸಿದೆವು. ಕೂಡಲೆ ನಾವು ಅಲ್ಲಿಗೆ ದೌಡಾಯಿಸಿದೆವಾದರೂ, ಆತ ಅಲ್ಲಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ. ಆ ಮನೆಯ ಸದಸ್ಯರು ಒಂದು ಬಾಟಲಿ ನೀರನ್ನು ಆತನಿಗೆ ನೀಡಿದ್ದರು” ಎಂದು ಅವರು ಹೇಳಿದ್ದಾರೆ.
ಆರೋಪಿಯು ಅದೇ ಪ್ರದೇಶದಲ್ಲಿರುವ ಕುರಿತು ಆ ಕುಟುಂಬ ನಮಗೆ ಮಾಹಿತಿ ನೀಡಿದ ನಂತರ, ನಾವು ಶೋಧ ಕಾರ್ಯಾಚರಣೆಯನ್ನು ಪುನಾರಂಭಿಸಿದೆವು. ಹತ್ತಿರದ ಗೋಧಿ ಗದ್ದೆಯೊಂದರಲ್ಲಿ ಅವಿತು ಕುಳಿತಿದ್ದ ಆತನನ್ನು ಸೆರೆ ಹಿಡಿದೆವು ಎಂದು ಅವರು ತಿಳಿಸಿದ್ದಾರೆ.
ಆರೋಪಿ ದತ್ತಾತ್ರೇಯ ರಾಮದಾಸ್ ಗಾಡೆ ವಿರುದ್ಧ ಪುಣೆ ಹಾಗೂ ಅಹಿಲ್ಯಾನಗರ ಜಿಲ್ಲೆಗಳಲ್ಲಿ ಕಳವು, ದರೋಡೆ ಹಾಗೂ ಸರಗಳ್ಳತನ ಸೇರಿದಂತೆ ಅರ್ಧ ಡಜನ್ ಗೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಒಂದು ಪ್ರಕರಣದಲ್ಲಿ 2019ರಲ್ಲಿ ಆತ ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದಿದ್ದ ಎಂದು ಹೇಳಲಾಗಿದೆ.







