ದಿಲ್ಲಿಗೆ ಹೊರಟಿದ್ದ ಆಕಾಶ ಏರ್ ವಿಮಾನಕ್ಕೆ ಹಕ್ಕಿ ಢಿಕ್ಕಿ; ತಪ್ಪಿದ ಅವಘಡ

File Photo: PTI
ಹೊಸದಿಲ್ಲಿ: ಪುಣೆಯಿಂದ ದಿಲ್ಲಿಗೆ ಪ್ರಯಾಣ ಬೆಳೆಸಿದ್ದ ಆಕಾಶ ಏರ್ ವಿಮಾನಕ್ಕೆ ಹಕ್ಕಿಯೊಂದು ಢಿಕ್ಕಿ ಹೊಡೆದರೂ, ವಿಮಾನವು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿರುವ ಘಟನೆ ವರದಿಯಾಗಿದೆ.
ದಿಲ್ಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ ವಿಮಾನವನ್ನು ಇಂಜಿನಿಯರಿಂಗ್ ತಂಡ ತಪಾಸಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಅಕ್ಟೋಬರ್ 10ರಂದು ಪುಣೆಯಿಂದ ದಿಲ್ಲಿಗೆ ಹೊರಟದ್ದ ಆಕಾಶ ಏರ್ ವಿಮಾನಕ್ಕೆ (QP 1607) ಹಕ್ಕಿಯೊಂದು ಮಾರ್ಗಮಧ್ಯದಲ್ಲಿ ಢಿಕ್ಕಿ ಹೊಡೆದಿದೆ. ಹೀಗಿದ್ದೂ, ವಿಮಾನ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ್ದು, ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ” ಎಂದು ಆಕಾಶ ಏರ್ ವಿಮಾನ ಯಾನ ಸಂಸ್ಥೆಯ ವಕ್ತಾರರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಸಂಖ್ಯೆಯನ್ನು ವಿಮಾನ ಯಾನ ಸಂಸ್ಥೆಯ ಅಧಿಕಾರಿಗಳು ಬಹಿರಂಗಪಡಿಸಿಲ್ಲವಾದರೂ, ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.





