Pune | ವಜಾಗೊಂಡ IAS ತರಬೇತಿ ಅಧಿಕಾರಿ ಪೂಜಾ ಖೇಡ್ಕರ್ ಅವರ ಪೋಷಕರು ಸೇರಿ ಐವರು ಬಂಗಲೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ; ಕಳ್ಳತನದ ಶಂಕೆ

pc :indianexpress
ಪುಣೆ, ಜ.11: ವಜಾಗೊಂಡ ಪ್ರೊಬೇಷನರಿ IAS ಅಧಿಕಾರಿ ಪೂಜಾ ಖೇಡ್ಕರ್ ಅವರ ಪೋಷಕರು ಸೇರಿದಂತೆ ಐವರು ಪುಣೆ ನಗರದ ಔಂಧ್ ಪ್ರದೇಶದಲ್ಲಿರುವ ನ್ಯಾಷನಲ್ ಹೌಸಿಂಗ್ ಸೊಸೈಟಿಯ ಬಂಗಲೆಯಲ್ಲಿ ರವಿವಾರ ಮುಂಜಾನೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಂಗಲೆಯಲ್ಲಿ ಕಳ್ಳತನ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರವಿವಾರ ಬೆಳಗಿನ ಜಾವ ಸುಮಾರು 1.30ರ ಸುಮಾರಿಗೆ ಕಳ್ಳತನ ನಡೆದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಮಾಹಿತಿ ಪಡೆದ ತಕ್ಷಣ ಚತುರ್ಶೃಂಗಿ ಪೊಲೀಸ್ ಠಾಣೆಯ ತಂಡ ಸ್ಥಳಕ್ಕೆ ಧಾವಿಸಿತು. ಪೊಲೀಸರು ಸ್ಥಳಕ್ಕೆ ತಲುಪಿದಾಗ ಪೂಜಾ ಖೇಡ್ಕರ್ ಹಾಗೂ ಅವರ ಸಹೋದರರಾದ ವಿನಯ್ ಬುಧ್ವಂತ್ ಮತ್ತು ಹರ್ಷದ್ ಬುಧ್ವಂತ್ ಬಂಗಲೆಯಲ್ಲಿದ್ದರು ಎಂದು ತಿಳಿದುಬಂದಿದೆ.
ಪೊಲೀಸರು ಬಂಗಲೆಯನ್ನು ಪರಿಶೀಲಿಸಿದ ವೇಳೆ, ಕಾವಲುಗಾರ ಜಿತೇಂದ್ರ ಸಿಂಗ್ ಕಾರು ಪಾರ್ಕಿಂಗ್ ಪ್ರದೇಶದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಳಿಕ ಪೂಜಾ ಖೇಡ್ಕರ್ ಅವರು ಪೊಲೀಸರನ್ನು ತಮ್ಮ ಪೋಷಕರ ಕೋಣೆಗೆ ಕರೆದೊಯ್ದರು. ಅಲ್ಲಿ ಅವರ ತಂದೆ ಮತ್ತು ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.
ಕೋಣೆಯಲ್ಲಿದ್ದ ಬೀರು ತೆರೆದಿದ್ದು, ಅದರೊಳಗಿನ ವಸ್ತುಗಳು ನೆಲದ ಮೇಲೆ ಅಸ್ತವ್ಯಸ್ತವಾಗಿ ಬಿದ್ದಿದ್ದವು. ಇದೇ ರೀತಿಯಾಗಿ ಬಂಗಲೆಯ ಇತರ ಮೂರು ಕೋಣೆಗಳಲ್ಲಿಯೂ ಬೀರುಗಳಲ್ಲಿದ್ದ ವಸ್ತುಗಳು ನೆಲದ ಮೇಲೆ ಚದುರಿಕೊಂಡಿರುವುದು ಕಂಡುಬಂದಿದೆ.
ಬಂಗಲೆಯ ನೆಲಮಹಡಿಯ ಕೋಣೆಯಲ್ಲಿ ಚಾಲಕ ದಾದಾಸಾಹೇಬ್ ಧಕ್ನೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಡುಗೆಯವ ಸುಜಿತ್ ರಾಯ್ ಬಂಗಲೆಯ ಹೊರಭಾಗದಲ್ಲಿರುವ ಕೋಣೆಯಲ್ಲಿ ಪ್ರಜ್ಞಾಹೀನರಾಗಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಆಂಬ್ಯುಲೆನ್ಸ್ಗಳನ್ನು ಕರೆಸಿದ ಪೊಲೀಸರು, ಪ್ರಜ್ಞಾಹೀನಗೊಂಡ ಐವರನ್ನುಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೋಷಕರ ಆರೋಗ್ಯ ಸ್ಥಿತಿ ಸರಿಯಿಲ್ಲದ ಕಾರಣ, ದೂರು ದಾಖಲಿಸುವುದನ್ನು ನಂತರ ಮಾಡುವುದಾಗಿ ಪೂಜಾ ಖೇಡ್ಕರ್ ಅವರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
“ಅರೆಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ. ಆದರೂ ಪ್ರಕರಣದ ತನಿಖೆ ಆರಂಭಿಸಲಾಗಿದೆ,” ಎಂದು ಉಪ ಪೊಲೀಸ್ ಆಯುಕ್ತ ಚಿಲುಮುಲ ರಜನಿಕಾಂತ್ ತಿಳಿಸಿದ್ದಾರೆ.
“ಕುಟುಂಬದಿಂದಲೇ ನೇಮಿಸಲ್ಪಟ್ಟ ಸೇವಕನೊಬ್ಬ ಕಳ್ಳತನದ ಉದ್ದೇಶದಿಂದ ನಿದ್ರಾಜನಕ ಔಷಧಿ ನೀಡಿರಬಹುದೆಂಬ ಶಂಕೆ ಇದೆ. ಶಂಕಿತ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ,” ಎಂದು ಅವರು ತಿಳಿಸಿದ್ದಾರೆ.
ಘಟನೆಯ ಸಮಯದಲ್ಲಿ ಬಂಗಲೆಯ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
►IASನಿಂದ ವಜಾಗೊಂಡಿದ್ದ ಪೂಜಾ ಖೇಡ್ಕರ್
ಸೆಪ್ಟೆಂಬರ್ 2024ರಲ್ಲಿ, ಕೇಂದ್ರ ಸಾರ್ವಜನಿಕ ಸೇವಾ ಆಯೋಗ ಪೂಜಾ ಖೇಡ್ಕರ್ ಅವರ ಆಯ್ಕೆಯನ್ನು ರದ್ದುಗೊಳಿಸಿದ ಬಳಿಕ, ಕೇಂದ್ರ ಸರ್ಕಾರ ಅವರನ್ನು ಭಾರತೀಯ ಆಡಳಿತ ಸೇವೆ (IAS)ಯಿಂದ ವಜಾಗೊಳಿಸಿತ್ತು.
2022ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಆಯ್ಕೆಯಾದ ಅವರು, ಅನುಮತಿಸಲಾದ ಪ್ರಯತ್ನಗಳ ಮಿತಿ ಮೀರಿದ್ದರೂ ಪರೀಕ್ಷೆಗೆ ಹಾಜರಾದ ಆರೋಪ ಎದುರಿಸಿದ್ದರು. ತಮ್ಮ ಹಾಗೂ ತಮ್ಮ ಪೋಷಕರ ಹೆಸರುಗಳನ್ನು ಬದಲಾಯಿಸಿ ಬೇರೆ ಅಭ್ಯರ್ಥಿಯಾಗಿ ಪರೀಕ್ಷೆ ಬರೆದಿದ್ದಾರೆ ಎಂಬ ಆರೋಪವೂ ಅವರ ಮೇಲೆ ಇದೆ.
ವಂಚನೆ, ಇತರ ಹಿಂದುಳಿದ ವರ್ಗ (ಒಬಿಸಿ) ಹಾಗೂ ಅಂಗವೈಕಲ್ಯ ಕೋಟಾದ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡ ಆರೋಪಗಳಲ್ಲಿ ಅವರು ತಪ್ಪಿತಸ್ಥರೆಂದು ಕಂಡುಬಂದಿದ್ದು, ಜೀವನಪರ್ಯಂತ ನಾಗರಿಕ ಸೇವಾ ಪರೀಕ್ಷೆ ಬರೆಯುವುದನ್ನು ನಿಷೇಧಿಸಲಾಗಿದೆ. ಈ ಆರೋಪಗಳನ್ನು ಅವರು ನಿರಾಕರಿಸಿದ್ದು, ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಇದಲ್ಲದೆ, 2023ರ ಜೂನ್ 5ರಂದು ಮುಲ್ಶಿ ತಹಸಿಲ್ನ ಧಡವಾಲಿ ಗ್ರಾಮದಲ್ಲಿ ರೈತರಿಗೆ ಬೆದರಿಕೆ ಹಾಕಿದ ಆರೋಪ ಸಂಬಂಧ ಪೌಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ, ಅವರ ತಂದೆ ದಿಲೀಪ್ ಖೇಡ್ಕರ್ ಮತ್ತು ತಾಯಿ ಮನೋರಮಾ ಖೇಡ್ಕರ್ ಆರೋಪಿಗಳಾಗಿದ್ದಾರೆ. ಭೂ ವಿವಾದದ ಬಳಿಕ ರೈತನ ಮೇಲೆ ಮನೋರಮಾ ಖೇಡ್ಕರ್ ಬಂದೂಕು ತೋರಿಸುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.







