ಪುಣೆ ಪೋಶೆ ಕಾರು ಅಪಘಾತ ಪ್ರಕರಣ: ಮೂವರು ಆರೋಪಿಗಳಿಗೆ ಜಾಮೀನು

Photo Credit ; PTI
ಹೊಸದಿಲ್ಲಿ: ಮಹಾರಾಷ್ಟ್ರದ ಪುಣೆಯಲ್ಲಿ 2024ರಲ್ಲಿ ಇಬ್ಬರು ಯುವ ಸಾಫ್ಟ್ವೇರ್ ಇಂಜಿನಿಯರ್ಗಳನ್ನು ಬಲಿ ತೆಗೆದುಕೊಂಡಿದ್ದ ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ.
ಆಶಿಷ್ ಮಿತ್ತಲ್,ಆದಿತ್ಯ ಸೂದ್ ಮತ್ತು ಅಮರ ಗಾಯಕ್ವಾಡ್ ಕಳೆದ 18 ತಿಂಗಳುಗಳಿಂದಲೂ ಜೈಲಿನಲ್ಲಿದ್ದು,ಮದ್ಯದ ಅಮಲಿನಲ್ಲಿ ಕಾರನ್ನು ಚಲಾಯಿಸುತ್ತಿದ್ದ 17ರ ಹರೆಯದ ಬಾಲಕನ ರಕ್ತದ ಮಾದರಿಗಳನ್ನು ತಿರುಚಲು ನೆರವಾಗಿದ್ದ ಆರೋಪವನ್ನು ಎದುರಿಸುತ್ತಿದ್ದಾರೆ.
ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ವಲ ಭುಯಾನ್ ಅವರ ಪೀಠವು,ಬಾಲಾಪರಾಧಿಗಳನ್ನು ಒಳಗೊಂಡ ಇಂತಹ ಪ್ರಕರಣಗಳಲ್ಲಿ ಮಕ್ಕಳನ್ನು ಬೆಳೆಸುವಲ್ಲಿ ಪೋಷಕರ ವೈಫಲ್ಯವನ್ನು ಬೆಟ್ಟು ಮಾಡಿತು.
ಅಪಘಾತದ ಸಮಯದಲ್ಲಿ ಬಾಲಕ ಕುಡಿದಿರಲಿಲ್ಲ ಎಂದು ತೋರಿಸಲು ಆತನ ರಕ್ತದ ಮಾದರಿಗಳನ್ನು ಬದಲಿಸಲು ಪ್ರಯತ್ನಿಸಿದ್ದಕ್ಕಾಗಿ ಆತನ ಪೋಷಕರು,ಸರಕಾರಿ ಆಸ್ಪತ್ರೆಯ ವೈದ್ಯರು ಮತ್ತು ಇತರರನ್ನೂ ಬಂಧಿಸಲಾಗಿತ್ತು.





