ಪುಣೆ ಸ್ವಾರಗೇಟ್ ಅತ್ಯಾಚಾರ ಪ್ರಕರಣ | ಆರೋಪಿ ಗಾಡೆ ಬಂಧನಕ್ಕೆ ಮುನ್ನ ಎರಡು ಸಲ ಆತ್ಮಹತ್ಯೆಗೆ ಯತ್ನಿಸಿದ್ದ: ಪೋಲಿಸರು

PC : PTI
ಪುಣೆ: ಇಲ್ಲಿಯ ಸ್ವಾರಗೇಟ್ ಡಿಪೋದಲ್ಲಿ ನಿಂತಿದ್ದ ಬಸ್ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ದತ್ತಾತ್ರಯ ರಾಮದಾಸ್ ಗಾಡೆಯನ್ನು ಶುಕ್ರವಾರ ಬೆಳಿಗ್ಗೆ ಬಂಧಿಸುವ ಮುನ್ನ ಆತ ಎರಡು ಸಲ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಪೋಲಿಸರು ತಿಳಿಸಿದ್ದಾರೆ. ಪುಣೆ ನ್ಯಾಯಾಲಯವು ಆರೋಪಿಗೆ 12 ದಿನಗಳ ಪೋಲಿಸ್ ಕಸ್ಟಡಿಯನ್ನು ವಿಧಿಸಿದೆ.
ರೌಡಿ ಶೀಟರ್ ಆಗಿರುವ ಗಾಡೆಯನ್ನು ಆತನ ಸ್ವಗ್ರಾಮ, ಪುಣೆ ಸಮೀಪದ ಶಿರೂರ ತಾಲೂಕಿನ ಗುನಾಟ್ನಲ್ಲಿಯ ಕಬ್ಬಿನ ಗದ್ದೆಯಿಂದ ಬಂಧಿಸಲಾಗಿದೆ. ಆತನನ್ನು ಬಂಧಿಸಲು ಶ್ವಾನದಳ, ಡ್ರೋನ್ಗಳು ಮತ್ತು 13 ಪೋಲಿಸ್ ತಂಡಗಳನ್ನು ನಿಯೋಜಿಸಲಾಗಿತ್ತು.
ಪೋಲಿಸರ ಪ್ರಕಾರ,ಗಾಡೆಯನ್ನು ಬಂಧಿಸಿದಾಗ ಆತನ ಕತ್ತಿನಲ್ಲಿ ಕುಣಿಕೆ ಬಿಗಿದ ಗುರುತು ಕಂಡು ಬಂದಿದ್ದು, ಆತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನುವುದನ್ನು ಇದು ಸೂಚಿಸುತ್ತದೆ.
ಗಾಡೆ ಕಬ್ಬಿನ ಗದ್ದೆಯಲ್ಲಿ ಅಡಗಿಕೊಂಡೇ ಗ್ರಾಮದಲ್ಲಿ ಪೋಲಿಸರ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ. ಪೋಲಿಸರಿಗೆ ಹೆದರಿ ಗದ್ದೆಯಲ್ಲಿದ್ದ ಒಣಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಹಗ್ಗ ತುಂಡಾಗಿದ್ದರಿಂದ ಆತನ ಪ್ರಯತ್ನ ವಿಫಲಗೊಂಡಿತ್ತು ಎಂದು ಹಿರಿಯ ಪೋಲಿಸ್ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.
ಗುರುವಾರ ರಾತ್ರಿ ಗಾಡೆ ನೀರನ್ನು ಕೇಳಿಕೊಂಡು ಗ್ರಾಮದಲ್ಲಿಯ ಮನೆಯೊಂದಕ್ಕೆ ಹೋಗಿದ್ದ. ಪೋಲಿಸ್ ಸಿಬ್ಬಂದಿಯೋರ್ವನ ಸೋದರ ಆತನನ್ನು ಗುರುತಿಸಿ ಮಾಹಿತಿ ನೀಡಿದ್ದು, ತಕ್ಷಣ ಪೋಲಿಸ್ ತಂಡಗಳು ಸ್ಥಳಕ್ಕೆ ಧಾವಿಸಿ ಗಾಡೆಯನ್ನು ಬಂಧಿಸಿದ್ದವು.
ಗಾಡೆ ಬಂಧನದಲ್ಲಿ ಪ್ರಮುಖ ಪಾತ್ರವಹಿಸಿದ್ದ ಗುನಾಟ್ ಗ್ರಾಮದ ಪ್ರೊ.ಗಣೇಶ ಗವ್ಹಾಣೆ ಪ್ರಕಾರ ಬಂಧನದ ಸಮಯದಲ್ಲಿ ಆತನ ಬಳಿ ಕೀಟನಾಶಕದ ಬಾಟ್ಲಿ ಪತ್ತೆಯಾಗಿತ್ತು. ಗ್ರಾಮದ ಕ್ರಿಕೆಟ್ ಮೈದಾನದ ಬಳಿ ಗಾಡೆ ಗ್ರಾಮಸ್ಥರ ಕಣ್ಣಿಗೆ ಬಿದ್ದಾಗ ಆತ ಅಲ್ಲಿಂದ ಓಡತೊಡಗಿದ್ದ. ಗ್ರಾಮಸ್ಥರು ಆತನನ್ನು ಹಿಡಿದಾಗ ಆತ ತನ್ನನ್ನು ಪೋಲಿಸರಿಗೆ ಹಸ್ತಾಂತರಿಸುವ ಮುನ್ನ ತಾನು ತನ್ನ ಮಗನೊಂದಿಗೆ ಮಾತನಾಡಬೇಕು ಎಂದು ಕೇಳಿಕೊಂಡಿದ್ದ.
ಗಾಡೆಯ ಕೈಯಲ್ಲಿದ್ದ ಕೀಟನಾಶಕದ ಬಾಟ್ಲಿಯನ್ನು ತಾನು ಕಿತ್ತುಕೊಂಡು ಪೋಲಿಸರಿಗೆ ಮಾಹಿತಿ ನೀಡಿದ್ದೆ. ಬಳಿಕ ಆತನನ್ನು ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದರು ಎಂದು ಗಾವ್ಹಣೆ ಸುದ್ದಿಸಂಸ್ಥೆಗೆ ತಿಳಿಸಿದರು.
ಅರ್ಧ ಡಝನ್ಗೂ ಅಧಿಕ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಗಾಡೆ ಮಂಗಳವಾರ ಪುಣೆಯ ಸ್ವಾರ್ಗೇಟ್ ಡಿಪೋದಲ್ಲಿ ನಿಂತಿದ್ದ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ನಲ್ಲಿ 26ರ ಹರೆಯದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಬಳಿಕ ತನ್ನ ಸ್ವಗ್ರಾಮಕ್ಕೆ ಪರಾರಿಯಾಗಿದ್ದ.







