ಪಂಜಾಬ್ | 30 ಕೆಜಿ ಹೆರಾಯಿನ್ ವಶ, ಆರೋಪಿ ಸೆರೆ

ಸಾಂದರ್ಭಿಕ ಚಿತ್ರ
ಚಂಡಿಗಡ: ಅಮೃತಸರ ಜಿಲ್ಲೆಯಲ್ಲಿ ಪೋಲಿಸರು ಶುಕ್ರವಾರ ಕಳ್ಳಸಾಗಣೆದಾರನೋರ್ವನನ್ನು ಬಂಧಿಸಿ 30 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳುವ ಮೂಲಕ ಗಡಿಯಾಚೆಯ ಮಾದಕದ್ರವ್ಯ ಕಳ್ಳಸಾಗಣೆ ಜಾಲವನ್ನು ಭೇದಿಸಿದ್ದಾರೆ.
ಆರೋಪಿ ಅಮೃತಸರದ ಘರಿಂಧಾ ನಿವಾಸಿ ಗುರಸಿಮ್ರನ್ ಜಿತ್ ಸಿಂಗ್ ಅಲಿಯಾಸ್ ಸಿಮ್ರನ್ ನನ್ನು ಪೋಲಿಸರು ಬಂಧಿಸಿದಾಗ ಆತ ಮಾದಕದ್ರವ್ಯವನ್ನು ವಿತರಿಸಲು ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಂದು ರಾಜ್ಯ ಡಿಜಿಪಿ ಗೌರವ್ ಯಾದವ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಸಿಮ್ರನ್ ಹೆರಾಯಿನ್ ಕಳ್ಳಸಾಗಣೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದ್ದು, ಇತ್ತೀಚಿಗೆ ಗಡಿಯಾಚೆಯಿಂದ ಡ್ರೋನ್ಗಳ ಮೂಲಕ ಭಾರೀ ಪ್ರಮಾಣದಲ್ಲಿ ಮಾದಕದ್ರವ್ಯಗಳನ್ನು ಸ್ವೀಕರಿಸಿದ್ದ ಎಂದರು.
ಈ ಜಾಲದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳನ್ನು ಗುರುತಿಸಲು ಮತ್ತು ಕಳ್ಳಸಾಗಣೆ ಜಾಲದ ಮೂಲವನ್ನು ಪತ್ತೆ ಹಚ್ಚಲು ತನಿಖೆಯನ್ನು ನಡೆಸಲಾಗುತ್ತಿದೆ.
ಗುಪ್ತಚರ ಮಾಹಿತಿಯ ಮೇರೆಗೆ ಪೋಲಿಸರು ಸಿಮ್ರನ್ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಅದರಲ್ಲಿ ಬಚ್ಚಿಟಿದ್ದ ಕಪ್ಪು ಚೀಲದಲ್ಲಿ ತಲಾ 7.5 ಕೆಜಿ ತೂಕದ ನಾಲ್ಕು ಹೆರಾಯಿನ್ ಪ್ಯಾಕೆಟ್ಗಳು ಪತ್ತೆಯಾಗಿವೆ. ಮಾದಕ ದ್ರವ್ಯಗಳ ಮೂಲ ಮತ್ತು ವಿತರಣಾ ಜಾಲದ ಬಗ್ಗೆ ವಿವರಗಳನ್ನು ಸಂಗ್ರಹಿಸಲು ಸಿಮ್ರನ್ ವಿಚಾರಣೆ ನಡೆಸಲಾಗುತ್ತಿದ್ದು, ಇನ್ನಷ್ಟು ಬಂಧನಗಳ ಸಾಧ್ಯತೆಯಿದೆ ಎಂದು ಅಮೃತಸರ ಗ್ರಾಮಾಂತರ ಎಸ್ಎಸ್ಪಿ ಚರಣಜಿತ್ ಸಿಂಗ್ ತಿಳಿಸಿದರು.
ಈ ಬಗ್ಗೆ ಘರಿಂಧಾ ಪೋಲಿಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.







