Punjab| ಸೈಬರ್ ವಂಚನೆಯಲ್ಲಿ 8.10 ಕೋಟಿ ರೂ. ಕಳೆದುಕೊಂಡಿದ್ದ ಮಾಜಿ ಐಜಿಪಿ ಅಮರ್ ಸಿಂಗ್ ಚಾಹಲ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನ

ಅಮರ್ ಸಿಂಗ್ ಚಾಹಲ್ | Photo Credit : NDTV
ಪಟಿಯಾಲ,ಡಿ. 22: 8.10 ಕೋಟಿ ರೂ. ಮೌಲ್ಯದ ಸೈಬರ್ ವಂಚನೆಯಲ್ಲಿ ಮೋಸ ಹೋಗಿದ್ದ ಪಂಜಾಬ್ನ ಮಾಜಿ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಅಮರ್ ಸಿಂಗ್ ಚಾಹಲ್ ಅವರು ಸೋಮವಾರ ತಮ್ಮ ಪಟಿಯಾಲ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಭದ್ರತಾ ಸಿಬ್ಬಂದಿಯ ರಿವಾಲ್ವರ್ನಿಂದ ಎದೆಗೆ ಗುಂಡು ಹಾರಿಸಿಕೊಂಡ ನಿವೃತ್ತ ಐಪಿಎಸ್ ಅಧಿಕಾರಿ ಚಾಹಲ್ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಪಟಿಯಾಲ ಪೊಲೀಸರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ಲಭ್ಯವಾದ ತಕ್ಷಣ ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಚಾಹಲ್ ಅವರು ಉಸಿರಾಡುತ್ತಿರುವ ಸ್ಥಿತಿಯಲ್ಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪಟಿಯಾಲ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವರುಣ್ ಶರ್ಮಾ ತಿಳಿಸಿದ್ದಾರೆ.
ಸೈಬರ್ ವಂಚನೆಯಿಂದ ಉಂಟಾದ ತೀವ್ರ ಆರ್ಥಿಕ ಸಂಕಷ್ಟವೇ ಈ ನಿರ್ಧಾರಕ್ಕೆ ಕಾರಣ ಎಂದು ಹೇಳಲಾಗಿದ್ದು, ಈ ಕುರಿತು ಚಾಹಲ್ ಅವರು ಪಂಜಾಬ್ ಪೊಲೀಸ್ ಮಹಾನಿರ್ದೇಶಕರಿಗೆ 12 ಪುಟಗಳ ಟಿಪ್ಪಣಿಯನ್ನು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಅಕ್ಟೋಬರ್ನಲ್ಲಿ ವಂಚನೆ ಆರೋಪ ಎದುರಿಸುತ್ತಿರುವ ಕಂಪೆನಿಯೊಂದರಲ್ಲಿ ಚಾಹಲ್ ಅವರು ಹೂಡಿಕೆ ಮಾಡಿದ್ದರು. ತಮ್ಮ ಪತ್ರದಲ್ಲಿ ತಾವು 1 ಕೋಟಿ ರೂ. ಹೂಡಿಕೆ ಮಾಡಿದ್ದು, ಉಳಿದ ಹಣವನ್ನು ಸ್ನೇಹಿತರು ಹಾಗೂ ಸಂಬಂಧಿಕರಿಂದ ಸಾಲವಾಗಿ ಪಡೆದು ಮೂರು ಬ್ಯಾಂಕ್ಗಳ ಮೂಲಕ ಆನ್ಲೈನ್ನಲ್ಲಿ ಪಾವತಿ ಮಾಡಿರುವುದಾಗಿ ಉಲ್ಲೇಖಿಸಿದ್ದಾರೆ.
ಈ ಪ್ರಕರಣ ಸಂಬಂಧ ಚಾಹಲ್ ಅವರು ಪ್ರಧಾನಿ, ಕೇಂದ್ರ ಗೃಹ ಸಚಿವ ಮತ್ತು ಹಣಕಾಸು ಸಚಿವೆ ಅವರಿಗೆ ಸಹ ಪತ್ರ ಬರೆದಿರುವುದಾಗಿ ತಿಳಿದುಬಂದಿದೆ.
ಮಾಜಿ ಐಪಿಎಸ್ ಅಧಿಕಾರಿ ನೀಡಿರುವ ಹೇಳಿಕೆಗಳು ಸೇರಿದಂತೆ ಘಟನೆಯ ಎಲ್ಲಾ ಅಂಶಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2015ರಲ್ಲಿ ನಡೆದ ಬೆಹ್ಬಲ್ ಕಲಾನ್ ಮತ್ತು ಕೊಟ್ಕಾಪುರ ಗುಂಡಿನ ದಾಳಿ ಪ್ರಕರಣಗಳಲ್ಲಿ ಚಾಹಲ್ ಅವರು ಆರೋಪ ಎದುರಿಸುತ್ತಿದ್ದು, ಅಪವಿತ್ರತೆ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ನಡೆದ ಈ ಘಟನೆಗಳಲ್ಲಿ ಇಬ್ಬರು ಪ್ರತಿಭಟನಾಕಾರರು ಮೃತಪಟ್ಟಿದ್ದರು.
“ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಿಂದ ತನಿಖೆ ಮಾಡಲಾಗುತ್ತಿದೆ. ಅವರ ಜೀವ ಉಳಿಸುವುದೇ ನಮ್ಮ ಮೊದಲ ಆದ್ಯತೆ,” ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವರುಣ್ ಶರ್ಮಾ ತಿಳಿಸಿದ್ದಾರೆ.







