ಪಂಜಾಬ್ ಪ್ರವಾಹ | ಕೇಂದ್ರದ 1,600 ಕೋ.ರೂ. ನೆರವಿನಿಂದ ಏನು ಮಾಡಲು ಸಾಧ್ಯ? : ಸಿಎಂ ಭಗವಂತ ಮಾನ್ ಪ್ರಶ್ನೆ

ಭಗವಂತ್ ಮಾನ್ | PC : PTI
ಹೊಸದಿಲ್ಲಿ, ಸೆ. 19: ಪಂಜಾಬ್ನಲ್ಲಿ ಕಳೆದ ವಾರಗಳಲ್ಲಿ ನೆರೆಯಿಂದ ಉಂಟಾದ ಹಾನಿಯ ಆರಂಭಿಕ ಅಂದಾಜು ಸುಮಾರು 13,800 ಕೋ. ರೂ. ಅಂತಿಮ ಅಂಕಿ-ಅಂಶ ಹೆಚ್ಚಾಗಬಹುದು. ಕೇಂದ್ರ ಸರಕಾರ ಕೇವಲ 1,600 ಕೋ.ರೂ. ನೆರವು ನೀಡಿದೆ. ನಾವು ಇದರಿಂದ ಏನು ಮಾಡಲು ಸಾಧ್ಯ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಶುಕ್ರವಾರ ಪ್ರಶ್ನಿಸಿದ್ದಾರೆ.
1600 ಕೋ. ರೂ.ನಲ್ಲಿ ಏನಾಗುತ್ತದೆ ? 1,600 ಕೋ.ರೂ.ನಿಂದ ಏನು ಮಾಡಲು ಸಾಧ್ಯ? ಅವರು ತಮಾಷೆ ಮಾಡುತ್ತಿದ್ದಾರಾ ? ಆರಂಭಿಕ ನಷ್ಟ 13,800 ಕೋ.ರೂ. 1,600 ಕೋ.ರೂ. ಸಾಗರದ ಕೇವಲ ಒಂದು ಹನಿ. ಅಲ್ಲದೆ, ರಾಜ್ಯದ 8,000 ಕೋ.ರೂ. ಗ್ರಾಮೀಣ ಅಭಿವೃದ್ಧಿ ನಿಧಿಯನ್ನು ಕೂಡ ಕೇಂದ್ರ ಸರಕಾರ ತಡೆ ಹಿಡಿದಿದೆ ಎಂದು ಅವರು ಹೇಳಿದರು.
ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಖರೀದಿ ಮೇಲೆ ಶೆ. 3 ಸೆಸ್ ವಿಧಿಸಿ ಆರ್ಡಿಎಫ್ ನಿಧಿ ಸಂಗ್ರಹಿಸಲಾಗುತ್ತಿದ್ದು, ಇದನ್ನು ರಸ್ತೆ ಹಾಗೂ ಮಂಡಿ ಅಥವಾ ರೈತರ ಸಗಟು ಮಾರುಕಟ್ಟೆಗಳನ್ನು ನಿರ್ವಹಿಸಲು ಬಳಸಲಾಗುತ್ತಿದೆ ಎಂದಿದ್ದಾರೆ.
‘‘ಪಂಜಾಬ್ಗೆ ಬರಬೇಕಾಗಿದ್ದ ಆರ್ಡಿಎಫ್ ಅನ್ನು ಯಾವುದೇ ಕಾರಣ ಇಲ್ಲದೆ ಸ್ಥಗಿತಗೊಳಿಸಲಾಗಿದೆ. ಬಿಜೆಪಿಯೇತರ ಸರಕಾರ ಇರುವ ರಾಜ್ಯಗಳಲ್ಲಿ ಇದೇ ಆಗುತ್ತಿದೆ. ಪ್ರತಿಪಕ್ಷದ ಆಡಳಿತ ಇರುವ ರಾಜ್ಯಗಳಿಗೆ ಬಿಜೆಪಿ ಹಣ ನೀಡುವುದಿಲ್ಲ’’ ಎಂದು ಭಗವಂತ ಮಾನ್ ತಿಳಿಸಿದರು.







