ಪಂಜಾಬ್ | ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನ ನಾಲ್ವರ ಸೆರೆ

Photo Credit : PTI
ಚಂಡೀಗಢ: ಚಂಡೀಗಢದ ಟ್ರೈಸಿಟಿ ಹಾಗೂ ಪಾಟಿಯಾಲ ಪ್ರಾಂತ್ಯಗಳಲ್ಲಿ ದಾಳಿ ನಡೆಸಲು ಯೋಜಿಸಿದ್ದ ವಿದೇಶಿ ಮೂಲದ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಗೆ ಸಂಬಂಧಿಸಿದ ನಾಲ್ವರನ್ನು ಗುಂಡಿನ ಚಕಮಕಿಯ ಬಳಿಕ ಬುಧವಾರ ಎಸ್ಎಎಸ್ ನಗರದ ಬಳಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ .32 ಕ್ಯಾಲಿಬರ್ ಪಿಸ್ತೂಲುಗಳು ಹಾಗೂ 70 ಜೀವಂತ ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಪಾಟಿಯಾಲದ ರಾಜ್ಪುರ ನಿವಾಸಿಗಳಾದ ಹರ್ವಿಂದರ್ ಸಿಂಗ್ ಅಲಿಯಾಸ್ ಭೋಲಾ ಅಲಿಯಾಸ್ ಹನಿ, ಲಖ್ವಿಂದರ್ ಸಿಂಗ್, ಮುಹಮ್ಮದ್ ಸಮೀರ್ ಹಾಗೂ ರೋಹಿತ್ ಶರ್ಮ ಎಂದು ಗುರುತಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಪಂಜಾಬ್ ಪೊಲೀಸ್ ಮಹಾ ನಿರ್ದೇಶಕ ಗೌರವ್ ಯಾದವ್, ವಿದೇಶಿ ಮೂಲದ ಗ್ಯಾಂಗ್ ಸ್ಟರ್ ಗೋಲ್ಡಿ ಧಿಲ್ಲೋನ್ ಸೂಚನೆಯ ಮೇರೆಗೆ ನಾಲ್ವರು ಬಂಧಿತರು ಕಾರ್ಯಾಚರಣೆ ನಡೆಸುತ್ತಿದ್ದರು. ಅವರೆಲ್ಲ ಚಂಡೀಗಢದ ಟ್ರೈಸಿಟಿ ಮತ್ತು ಪಾಟಿಯಾಲ ಪ್ರಾಂತ್ಯದಲ್ಲಿ ದಾಳಿ ನಡೆಸಲು ಯೋಜಿಸಿದ್ದರು ಎಂದು ತಿಳಿಸಿದ್ದಾರೆ.
ಎಸ್ಎಎಸ್ ನಗರ್ ಜಿಲ್ಲೆಯಲ್ಲಿನ ಡೇರಾ ಬಸ್ಸಿ-ಅಂಬಾಲ ಹೆದ್ದಾರಿಯಲ್ಲಿನ ಸ್ಟೀಲ್ ಸ್ಟ್ರಿಪ್ಸ್ ಟವರ್ಸ್ ಬಳಿ ನಡೆದ ಗುಂಡಿನ ಚಕಮಕಿಯ ಬಳಿಕ ಪಂಜಾಬ್ ಪೊಲೀಸ್ ಇಲಾಖೆಯ ಗ್ಯಾಂಗ್ ಸ್ಟರ್ ನಿಗ್ರಹ ಕಾರ್ಯಪಡೆ ಹಾಗೂ ಎಸ್ಎಎಸ್ ನಗರ್ ಪೊಲೀಸರು ಆರೋಪಿಗಳನ್ನು ಬಂಧಿಸಿದರು ಎಂದು ಅವರು ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿಯ ವಿವಿಧ ಸೆಕ್ಷನ್ ಗಳಡಿ ಡೇರಾ ಬಸಾಯಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಗಳಿಗಿರುವ ಸಂಬಂಧಗಳ ಕುರಿತು ಪತ್ತೆ ಹಚ್ಚಲು ತನಿಖೆ ಪ್ರಗತಿಯಲ್ಲಿದೆ.







