ಪಂಜಾಬ್|ಪ್ರಿಯಕರನ ಸಹಾಯದಿಂದ ಪತಿಯ ಹತ್ಯೆ ಆರೋಪ ; ಕೆನಡಾದಿಂದ ಮರಳಿದ ಮಹಿಳೆ ಬಂಧನ

ಚಂಡೀಗಢ/ಭಟಿಂಡಾ: ಪರಪುರುಷನ ನೆರವಿನಿಂದ ಪತಿಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಕೆನಡಾದಿಂದ ಮರಳಿದ ಭಾರತೀಯ ಮಹಿಳೆಯೊಬ್ಬಳನ್ನು ಶುಕ್ರವಾರ ರಾತ್ರಿ ಫರೀದ್ ಕೋಟ್ ನ ಶೂಖನ್ ವಾಲಾ ಗ್ರಾಮದಲ್ಲಿ ಬಂಧಿಸಲಾಗಿದೆ. ಬಂಧಿತ ಮಹಿಳೆ ರೂಪಿಂದರ್ ಕೌರ್ ಕೆನಡಾದಿಂದ ಗಡೀಪಾರಾಗಿದ್ದಾಳೆಯೇ ಎಂಬ ಬಗ್ಗೆ ಮತ್ತು ಆಕೆಯ ಪ್ರಿಯಕರ ಹರ್ ಕನ್ವಲ್ ಪ್ರೀತ್ ಸಿಂಗ್ ಕೂಡಾ ಕೆನಡಾದಿಂದ ಮರಳಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ರೂಪಿಂದರ್ ಸಿಂಗ್ ವಿವಾಹ ಫರೀದ್ ಕೋಟ್ ನ ಶೂಖನ್ ವಾಲಾ ಗ್ರಾಮದ ಗುರ್ವೀಂದರ್ ಸಿಂಗ್ ಜತೆ ನಡೆದಿತ್ತು.
ಖಾಸಗಿ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಗುರ್ವೀಂದರ್ ವಿವಾಹ ರೂಪಿಂದರ್ ಕೌರ್ ಜತೆಗೆ 2023ರ ನವೆಂಬರ್ ನಲ್ಲಿ ನಡೆದಿತ್ತು. 2019ರಲ್ಲಿ ಕೆನಡಾಗೆ ವಲಸೆ ಹೋಗಿದ್ದ ರೂಪಿಂದರ್ ವಿವಾಹಕ್ಕೆ ಆಗಮಿಸಿ ಕೆಲ ದಿನಗಳ ಬಳಿಕ ವಾಪಸ್ಸಾಗಿದ್ದಳು. 2025ರ ಜನವರಿಯಲ್ಲಿ ಮತ್ತೆ ಭಾರತಕ್ಕೆ ಬಂದು ಗುರ್ವೀಂದರ್ ಜತೆಗೆ ಶುಖನ್ ವಾಲಾ ಗ್ರಾಮದಲ್ಲಿ ವಾಸವಿದ್ದಳು. ಗುರ್ವೀಂದರ್ ಸಿಂಗ್ ಪೋಷಕರು 2025ರ ಮಾರ್ಚ್ ನಲ್ಲಿ ಕೆನಡಾಗೆ ಮರಳಿದ ಬಳಿಕ ಈ ದಂಪತಿ ಮಾತ್ರ ವಾಸವಿದ್ದರು" ಎಂದು ಸಹೋದರಿ ಮನ್ವೀರ್ ಕೌರ್ ಹೇಳಿದ್ದಾರೆ. ಕೆನಡಾದ ಕಾಯಂ ನಿವಾಸಿಯಾಗಿರುವ ಕೌರ್ ಫಝಿಲ್ಕಾ ಜೋಕ್ಡಿ ಕನ್ಕರ್ ಗ್ರಾಮದಲ್ಲಿರುವ ಭಾವನ ಮನೆಗೆ ಬಂದಿದ್ದು, ರೂಪಿಂದರ್ ವಿರುದ್ಧ ದೂರು ನೀಡಿದ್ದಾರೆ.
ಗುರ್ವೀಂದರ್ ಜತೆ ಸದಾ ಜಗಳ ಮಾಡುತ್ತಿದ್ದ ರೂಪಿಂದರ್ ಚಾರಿತ್ರ್ಯದ ಬಗ್ಗೆ ಗುರ್ವೀಂದರ್ ಗೆ ಅನುಮಾನ ಇತ್ತು ಎಂದು ದೂರಿನಲ್ಲಿ ಹೇಳಲಾಗಿದೆ. ಕೆನಡಾ ನಿವಾಸಿಯಾಗಿದ್ದ ತನಗೆ ಬಲವಂತವಾಗಿ ವಿವಾಹ ಮಾಡಿಸಲಾಗಿದೆ ಎಂದು ರೂಪಿಂದರ್ ಹೇಳುತ್ತಿದ್ದುದಾಗಿ ವಿವರಿಸಿದ್ದಾರೆ. ರೂಪಿಂದರ್ ಮತ್ತು ಹರ್ ಕನ್ವಲ್ ಪ್ರೀತ್ ನಡುವೆ ಅಕ್ರಮ ಸಂಬಂಧ ಇತ್ತು ಎನ್ನುವುದಕ್ಕೆ ನವೆಂಬರ್ 28ರಂದು ಪುರಾವೆ ಸಿಕ್ಕಿತ್ತು. ಪ್ರಿಯಕರನ ಸಹಾಯದಿಂದ ಪತಿಯನ್ನು ಹತ್ಯೆ ಮಾಡಿ ಆಸ್ತಿ ಕಬಳಿಸುವ ಸಂಚು ರೂಪಿಸಲಾಗಿತ್ತು ಎಂದು ಹೇಳಲಾಗಿದೆ.
ಗುರ್ವೀಂದರ್ ಮನೆಯಿಂದ ಆರೋಪಿ ಮಹಿಳೆ ಪರಪುರುಷನ ಜತೆಗೆ ರಾತ್ರಿ 11 ಗಂಟೆ ವೇಳೆ ತಿರುಗಾಡುತ್ತಿದ್ದುದಾಗಿ ನೆರೆಮನೆಯಲ್ಲಿ ವಾಸವಿದ್ದ ಜಿತೇಂದ್ರ ಸಿಂಗ್ ಹೇಳಿದ್ದನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ರೂಪಿಂದರ್ ಈ ಸಂದರ್ಭದಲ್ಲಿ ಬಾಗಿಲು ತೆಗೆದಿದ್ದು, ಆ ಬಳಿಕ ಗುರ್ವೀಂದರ್ ಹತ್ಯೆಯಾಗಿರುವುದು ಬೆಳಕಿಗೆ ಬಂತು. ಅಲ್ಮೇರಾದಲ್ಲಿದ್ದ ಚಿನ್ನ ನಾಪತ್ತೆಯಾಗಿತ್ತು ಎಂದು ದೂರಿನಲ್ಲಿ ವಿವರಿಸಲಾಗಿದೆ.







