ಅಂತರರಾಷ್ಟ್ರೀಯ ಮಾದಕ ದ್ರವ್ಯ ಜಾಲ ಭೇದಿಸಿದ ಪಂಜಾಬ್ ಪೋಲಿಸರು; ಒಂಭತ್ತು ಶಂಕಿತರ ಬಂಧನ, 60.302 ಕೆಜಿ ಹೆರಾಯಿನ್ ವಶ

ಸಾಂದರ್ಭಿಕ ಚಿತ್ರ
ಚಂಡಿಗಡ: ಪಂಜಾಬ್ ಪೋಲಿಸರು ಗಡಿ ಭದ್ರತಾ ಪಡೆ(ಬಿಎಸ್ಎಫ್) ಮತ್ತು ರಾಜಸ್ಥಾನ ಪೋಲಿಸರ ಸಹಯೋಗದೊಂದಿಗೆ ನಡೆಸಿದ ಕಾರ್ಯಾಚರಣೆಯಲ್ಲಿ 60.302 ಕೆಜಿ ಹೆರಾಯಿನ್ ವಶಪಡಿಸಿಕೊಂಡು ಒಂಭತ್ತು ಜನರನ್ನು ಬಂಧಿಸಿದ್ದಾರೆ. ಈ ಮೂಲಕ ಕಳ್ಳಸಾಗಣೆದಾರರಾದ ಪಾಕಿಸ್ತಾನ ಮೂಲದ ತನ್ವೀರ್ ಶಾ ಮತ್ತು ಕೆನಡಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಜೋಬನ್ ಕಲೇರ್ ಅವರು ನಡೆಸುತ್ತಿದ್ದ ಗಡಿಯಾಚೆಯ ಮಾದಕ ದ್ರವ್ಯ ಕಳ್ಳಸಾಗಣೆಯಲ್ಲಿ ತೊಡಗಿದ್ದ ಅಂತರರಾಷ್ಟ್ರೀಯ ಮಾದಕ ದ್ರವ್ಯ ಜಾಲವನ್ನು ಭೇದಿಸಿದ್ದಾರೆ.
ಅಮೃತಸರ ಪೋಲಿಸ್ ಕಮಿಷನರೇಟ್ ನಡೆಸಿದ ಅಂತರರಾಜ್ಯ ಕಾರ್ಯಾಚರಣೆಯಲ್ಲಿ ರಾಜಸ್ಥಾನದ ಬಾರ್ಮೇರ್ ನಲ್ಲಿಯ ಭಾರತ-ಪಾಕ್ ಅಂತರರಾಷ್ಟ್ರೀಯ ಗಡಿ ಬಳಿಯಿಂದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದ್ದು,ಓರ್ವ ಮಹಿಳೆ ಸೇರಿದಂತೆ ಒಂಭತ್ತು ಶಂಕಿತರನ್ನು ಪಂಜಾಬ್, ಹರ್ಯಾಣ ಮತ್ತು ಜಮ್ಮುಕಾಶ್ಮೀರದಿಂದ ಬಂಧಿಸಲಾಗಿದೆ. ಬಂಧಿತರಲ್ಲಿ ಆರು ಜನರನ್ನು ಗುರುಸಾಹಿಬ್ ಸಿಂಗ್, ಜಶನ್ಪ್ರೀತ್ ಸಿಂಗ್, ಕುಲ್ವಿಂದರ್ ಸಿಂಗ್, ಪರ್ಶೋತ್ತಮ ಸಿಂಗ್, ಗಗನ್ ದೀಪ ಸಿಂಗ್ ಮತ್ತು ರಾಜಿಂದರ್ ಕೌರ್ ಎಂದು ಗುರುತಿಸಲಾಗಿದ್ದು, ಎಲ್ಲರೂ ಅಮೃತಸರ ಜಿಲ್ಲೆಯ ನಿವಾಸಿಗಳಾಗಿದ್ದಾರೆ.
ಬಂಧಿತರಲ್ಲಿ ಕಳ್ಳ ಸಾಗಣೆದಾರರು ಮತ್ತು ಹವಾಲಾಕೋರರು ಸೇರಿದ್ದಾರೆ. ಇಡೀ ಜಾಲದ ಸಂಪರ್ಕಗಳನ್ನು ಬಯಲಿಗೆಳೆಯಲು ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಇನ್ನಷ್ಟು ಬಂಧನಗಳಾಗುವ ಸಾಧ್ಯತೆಯಿದೆ ಎಂದು ಪಂಜಾಬ್ ಡಿಜಿಪಿ ಗೌರವ ಯಾದವ ಅವರು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.





