ಪಾಕ್ಗೆ ಸೇನಾ ಮಾಹಿತಿ ಸೋರಿಕೆ: ಪಂಜಾಬ್ ಪೊಲೀಸರಿಂದ ಇಬ್ಬರ ಬಂಧನ

Photo: PTI
ಚಂಡೀಗಢ: ಅಮೃತಸರದಲ್ಲಿಯ ಭಾರತೀಯ ರಕ್ಷಣಾ ನೆಲೆಗಳ ಚಿತ್ರಗಳನ್ನು ಪಾಕಿಸ್ತಾನಿ ಬೇಹುಗಾರರಿಗೆ ಸೋರಿಕೆ ಮಾಡಿದ ಆರೋಪದಲ್ಲಿ ಇಬ್ಬರನ್ನು ಪಂಜಾಬ್ ಪೋಲಿಸರು ಬಂಧಿಸಿದ್ದಾರೆ.
ಮಹತ್ವದ ಪ್ರತಿ-ಬೇಹುಗಾರಿಕೆ ಕಾರ್ಯಾಚರಣೆಯಲ್ಲಿ ಅಮೃತಸರ ಗ್ರಾಮೀಣ ಪೋಲಿಸರು ಅಮೃತಸರದಲ್ಲಿರುವ ಸೇನಾ ದಂಡುಪ್ರದೇಶಗಳು ಮತ್ತು ವಾಯು ನೆಲೆಗಳ ಕುರಿತು ಸೂಕ್ಷ್ಮ ಮಾಹಿತಿ ಮತ್ತು ಚಿತ್ರಗಳ ಸೋರಿಕೆಯಲ್ಲಿ ಪಾತ್ರ ವಹಿಸಿದ್ದ ಪಲಕ್ ಶೇರ್ ಮಸೀಹ್ ಮತ್ತು ಸೂರಜ್ ಮಸೀಹ್ ಎಂಬವರನ್ನು ಮೇ 3ರಂದು ಬಂಧಿಸಿದ್ದಾರೆ ಎಂದು ಪಂಜಾಬ್ ಪೋಲಿಸ್ ಮಹಾನಿರ್ದೇಶಕ(ಡಿಜಿಪಿ) ಗೌರವ ಯಾದವ್ ಅವರು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಬಂಧಿತರು ಪಾಕಿಸ್ತಾನದ ಗುಪ್ತಚರ ಏಜೆಂಟ್ಗಳ ಜೊತೆ ತಮ್ಮ ಸಂಪರ್ಕವನ್ನು ಒಪ್ಪಿಕೊಂಡಿದ್ದಾರೆ. ಪ್ರಸ್ತುತ ಅಮೃತಸರ ಸೆಂಟ್ರಲ್ ಜೈಲಿನಲ್ಲಿರುವ ಹರ್ಪ್ರೀತ್ ಸಿಂಗ್ ಅಲಿಯಾಸ್ ಪಿಟ್ಟು ಅಲಿಯಾಸ ಹ್ಯಾಪಿ ಮೂಲಕ ಅವರು ಈ ಸಂಪರ್ಕವನ್ನು ಸಾಧಿಸಿದ್ದರು. ಅಧಿಕೃತ ರಹಸ್ಯಗಳ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು,ತನಿಖೆ ಪ್ರಗತಿಯಲ್ಲಿದೆ. ತನಿಖೆ ತೀವ್ರಗೊಂಡಂತೆ ಇನ್ನಷ್ಟು ಮಹತ್ವದ ಮಾಹಿತಿಗಳು ಬಹಿರಂಗಗೊಳ್ಳುವ ನಿರೀಕ್ಷೆಯಿದೆ ಎಂದು ಡಿಜಿಪಿ ಹೇಳಿದ್ದಾರೆ.





