Punjab | ವಿವಾಹ ಸಮಾರಂಭದಲ್ಲಿ ಗುಂಡು ಹಾರಾಟ; ಇಬ್ಬರು ಮೃತ್ಯು, ಓರ್ವನಿಗೆ ಗಾಯ

Photo | ANI
ಲುಧಿಯಾನ, ನ. 29: ಇಲ್ಲಿನ ಪಾಖೊವಾಲ್ ರಸ್ತೆಯಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಎದುರಾಳಿ ಗುಂಪುಗಳು ಪರಸ್ಪರ ಗುಂಡು ಹಾರಿಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ ಹಾಗೂ ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಶನಿವಾರ ರಾತ್ರಿ ನಡೆದ ವಿವಾಹ ಸಮಾರಂಭಕ್ಕೆ ಆಹ್ವಾನಿಸಲಾಗಿದ್ದ ಎರಡು ಗುಂಪುಗಳ ನಡುವೆ ಹಳೆಯ ದ್ವೇಷವಿತ್ತು. ಒಂದು ಗುಂಪಿನ ನೇತೃತ್ವವನ್ನು ಶುಭಂ ಮೊಟ್ಟ ವಹಿಸಿದ್ದಾರೆ, ಇನ್ನೊಂದು ಗುಂಪಿನ ನೇತೃತ್ವವನ್ನು ಅಂಕುರ್ ವಹಿಸಿದ್ದರು. ಇಬ್ಬರ ವಿರುದ್ಧವೂ ಹಲವು FIR ಗಳು ದಾಖಲಾಗಿವೆ ಎಂದು ಅವರು ಹೇಳಿದ್ದಾರೆ.
ವಿವಾಹ ಸಮಾರಂಭದಲ್ಲಿ ಅವರು ಮುಖಾಮುಖಿಯಾದರು. ಆರಂಭದಲ್ಲಿ ಅವರ ನಡುವೆ ಕೆಲವು ವಿಷಯಗಳ ಕುರಿತು ವಾಗ್ವಾದ ನಡೆಯಿತು. ಅದು ಘರ್ಷಣೆಗೆ ಕಾರಣವಾಯಿತು. ಈ ಸಂದರ್ಭ ಕೆಲವರು ಮಧ್ಯಪ್ರವೇಶಿಸಿ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ
ಅನಂತರ ಎರಡೂ ಎದುರಾಳಿ ಗುಂಪುಗಳು ಪರಸ್ಪರ ವಿವೇಚನಾರಹಿತವಾಗಿ ಗುಂಡು ಹಾರಿಸಿದವು. ಅವರು 25-30 ಸುತ್ತು ಗುಂಡು ಹಾರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂದರ್ಭ ಗುಂಡು ತಗುಲಿ ಅತಿಥಿಗಳಾದ ವಾಸು ಚೋಪ್ರಾ ಹಾಗೂ ನೀರು ಮೃತಪಟ್ಟಿದ್ದಾರೆ. ಅನಂತರ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್ ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







