‘Pushpa 2’ ಕಾಲ್ತುಳಿತ | ಚಾರ್ಜ್ ಶೀಟ್ ನಲ್ಲಿ ನಟ ಅಲ್ಲು ಅರ್ಜುನ್ ಹೆಸರು

ಅಲ್ಲು ಅರ್ಜುನ | Photo Credit : PTI
ಹೈದರಾಬಾದ್,ಡಿ.27: ‘ಪುಷ್ಪಾ 2: ದಿ ರೂಲ್’ ಚಿತ್ರದ ಪ್ರೀಮಿಯರ್ ಶೋ ಸಂದರ್ಭದಲ್ಲಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಂಪಲ್ಲಿ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ದೋಷಾರೋಪ ಪಟ್ಟಿಯಲ್ಲಿ ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ ಮತ್ತು ಇತರ 23 ಜನರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ.
ಡಿ.4,2024ರಂದು ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ಅಲ್ಲು ಅರ್ಜುನ ನಟನೆಯ ‘ಪುಷ್ಪಾ 2:ದಿ ರೂಲ್’ ಚಿತ್ರದ ಪ್ರೀಮಿಯರ್ ಶೋ ಸಂದರ್ಭದಲ್ಲಿ ತಮ್ಮ ನೆಚ್ಚಿನ ನಟನನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ರೇವತಿ (35) ಎಂಬಾಕೆ ಮೃತಪಟ್ಟು ಆಕೆಯ ಅಪ್ರಾಪ್ತ ವಯಸ್ಕ ಪುತ್ರ ಶ್ರೀತೇಜ್ ಗಂಭೀರವಾಗಿ ಗಾಯಗೊಂಡಿದ್ದ. ಶ್ರೇತೇಜ್ ಈಗಲೂ ಮಲಗಿದ್ದಲ್ಲಿಂದ ಏಳಲಾಗದ ಸ್ಥಿತಿಯಲ್ಲಿದ್ದಾನೆ. ಘೋರ ನಿರ್ಲಕ್ಷ ಮತ್ತು ಸುರಕ್ಷತಾ ಶಿಷ್ಟಾಚಾರಗಳನ್ನು ಪಾಲಿಸುವಲ್ಲಿ ವೈಫಲ್ಯ ಈ ದುರಂತಕ್ಕೆ ಕಾರಣ ಎಂದು ಪೋಲಿಸರು ತೀರ್ಮಾನಿಸಿದ್ದರು.
ಅಲ್ಲು ಅರ್ಜುನ ಬರುತ್ತಿದ್ದಾರೆಂದು ಗೊತ್ತಿದ್ದರೂ ಜನಜಂಗುಳಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳದ್ದಕ್ಕಾಗಿ ಥಿಯೇಟರ್ನ ಮಾಲಿಕ ಮತ್ತು ಸಿಬ್ಬಂದಿಗಳನ್ನು ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದು,ಅಪಾಯವುಂಟಾಗುವ ಸ್ಥಿತಿಯಿದೆ ಎಂದು ಗೊತ್ತಿದ್ದರೂ ಥಿಯೇಟರ್ಗೆ ಭೇಟಿ ನೀಡಿದ್ದಕ್ಕಾಗಿ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯದ ಕೊರತೆಗಾಗಿ ಅಲ್ಲು ಅರ್ಜುನರನ್ನು ಆರೋಪಿಯನ್ನಾಗಿ ಮಾಡಲಾಗಿದೆ.
ಆರೋಪಿಗಳಲ್ಲಿ ಅಲ್ಲು ಅರ್ಜುನ ಅವರ ಪರ್ಸನಲ್ ಮ್ಯಾನೇಜರ್,ಅವರ ಸಿಬ್ಬಂದಿಗಳು ಮತ್ತು ಪರಿಸ್ಥಿತಿ ಉಲ್ಬಣಿಸಲು ಕಾರಣರಾಗಿದ್ದರೆನ್ನಲಾದ ಎಂಟು ಖಾಸಗಿ ಬೌನ್ಸರ್ ಗಳೂ ಸೇರಿದ್ದಾರೆ.







