ಮೋದಿ ಜೊತೆ ಪುಟಿನ್ ಚರ್ಚೆ: ಭಯೋತ್ಪಾದನೆ ವಿರುದ್ಧ ಹೋರಾಡಲು ಭಾರತಕ್ಕೆ ಸಂಪೂರ್ಣ ಬೆಂಬಲ

Photo Credit: PTI
ಹೊಸದಿಲ್ಲಿ: ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ.
25 ಜನರು ಸಾವನ್ನಪ್ಪಲು ಕಾರಣವಾದ ಜಮ್ಮು ಹಾಗೂ ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪುಟಿನ್ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಬಿಕ್ಕಟ್ಟಿನಲ್ಲಿ ರಷ್ಯಾ, ಚೀನಾ ಅಥವಾ ಪಶ್ಚಿಮದ ರಾಷ್ಟ್ರಗಳು ಸಕಾರಾತ್ಮಕ ಪಾತ್ರ ವಹಿಸಲು ಸಾಧ್ಯ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಸಂದರ್ಶನವೊಂದರಲ್ಲಿ ಹೇಳಿದ ದಿನಗಳ ಬಳಿಕ ವ್ಲಾದಿಮಿರ್ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ದೂರವಾಣಿ ಕರೆ ಮಾಡಿದ್ದಾರೆ. ಆದುದರಿಂದ ಈ ದೂರವಾಣಿ ಕರೆ ಮಹತ್ವ ಪಡೆದುಕೊಂಡಿದೆ.
ದಾಳಿಯಲ್ಲಿ ಅಮಾಯಕರು ಸಾವನ್ನಪ್ಪಿರುವ ಕುರಿತು ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಅವರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ದಾಳಿಯ ಅಪರಾಧಿಗಳು ಹಾಗೂ ಅವರ ಬೆಂಬಲಿಗರನ್ನು ಕಾನೂನಿನ ಮುಂದೆ ತರಬೇಕು ಎಂದು ಅವರು ಒತ್ತಿ ಹೇಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ‘ಎಕ್ಸ್’ನ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಭಾರತ ಹಾಗೂ ರಶ್ಯಾದ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಮೋದಿ ಹಾಗೂ ಪುಟಿನ್ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ‘ವಿಕ್ಟರಿ ಡೇ’ಯ 80ನೇ ವರ್ಷಾಚರಣೆಯ ಸಂದರ್ಭದಲ್ಲಿ ಮೋದಿ ಅವರು ಪುಟಿನ್ ಅವರಿಗೆ ಶುಭಾಷಯ ಕೋರಿದ್ದಾರೆ. ಅಲ್ಲದೆ, ಭಾರತದಲ್ಲಿ ಈ ವರ್ಷ ನಡೆಯಲಿರುವ ವಾರ್ಷಿಕ ಶೃಂಗಕ್ಕೆ ಅವರನ್ನು ಆಹ್ವಾನಿಸಿದ್ದಾರೆ ಎಂದು ರಣಧೀರ್ ಜೈಸ್ವಾಲ್ ಹೇಳಿದ್ದಾರೆ.







