ಅಪರಾಧ ಸ್ಥಳಕ್ಕೆ ಭೇಟಿ ನೀಡಲು ವಕೀಲರಿಗೆ ಅನುಮತಿ ನೀಡಬೇಕು: ಕಲ್ಕತ್ತಾ ಹೈಕೋರ್ಟ್ ಮೊರೆ ಹೋದ ಆರ್ಜಿ ಕರ್ ಅತ್ಯಾಚಾರ ಹತ್ಯೆ ಸಂತ್ರಸ್ತೆಯ ತಂದೆ

PC : PTI
ಕೋಲ್ಕತ್ತಾ: ಸರಕಾರಿ ವೈದ್ಯಕೀಯ ಸಂಸ್ಥೆಯಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದ್ದ ತಮ್ಮ ಪುತ್ರಿಯ ಅತ್ಯಾಚಾರ-ಹತ್ಯೆಯ ಘಟನಾ ಸ್ಥಳಕ್ಕೆ ತಮ್ಮ ವಕೀಲರು ಭೇಟಿ ನೀಡಲು ಕೆಳ ಹಂತದ ನ್ಯಾಯಾಲಯ ನಿರಾಕರಿಸಿರುವುದನ್ನು ಪ್ರಶ್ನಿಸಿ ಸಂತ್ರಸ್ತೆಯ ತಂದೆ ಕಲ್ಕತ್ತಾ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಕಳೆದ ವರ್ಷದ ಆಗಸ್ಟ್ 9ರಂದು ತಮ್ಮ ವೈದ್ಯ ಪುತ್ರಿಯ ಅತ್ಯಾಚಾರ ಮತ್ತು ಹತ್ಯೆ ನಡೆಸಿದ ಆರೋಪದಲ್ಲಿ ನೈಸರ್ಗಿಕ ಸಾವು ಬರುವವರೆಗೂ ವಿಚಾರಣಾ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸಂಜಯ್ ರಾಯ್ ನೊಂದಿಗೆ ಇತರರೂ ಸ್ಥಳದಲ್ಲಿ ಹಾಜರಿದ್ದರು ಎಂದು ಅವರು ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.
ಮುಂದಿನ ವಾರ ಈ ಅರ್ಜಿಯ ವಿಚಾರಣೆಯನ್ನು ಏಕಸದಸ್ಯ ಪೀಠ ನಡೆಸುವ ಸಾಧ್ಯತೆ ಇದೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ.
ತನಿಖೆಯ ವೇಳೆ ಏನಾದರೂ ಸಾಕ್ಷ್ಯಾಧಾರಗಳ ಸಂಗ್ರಹದಲ್ಲಿ ಲೋಪವಾಗಿದೆಯೆ ಎಂಬುದನ್ನು ಪತ್ತೆ ಹಚ್ಚಲು ಘಟನಾ ಸ್ಥಳದ ಸ್ವತಂತ್ರ ಪರಿಶೀಲನೆ ನಡೆಸುವುದು ಅತಿ ಮುಖ್ಯವಾಗಿದೆ ಎಂದು ಅವರು ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.
ಆಗಸ್ಟ್ 9, 2024ರಂದು ಕರ್ತವ್ಯ ನಿರತ ವೈದ್ಯೆಯ ಮೃತ ದೇಹವು ಕೋಲ್ಕತ್ತಾದಲ್ಲಿನ ಆರ್ಜಿ ಕರ್ ಸೆಮಿನಾರ್ ಕೊಠಡಿಯಲ್ಲಿ ಪತ್ತೆಯಾಗಿತ್ತು. ಇದರ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಈ ಘಟನೆಯ ಸಂಬಂಧ ನಗರ ಪೊಲೀಸರಿಗೆ ಸ್ವಯಂಸೇವಕನಾಗಿ ಕೆಲಸ ನಿರ್ವಹಿಸುತ್ತಿದ್ದ ಸಂಜಯ್ ರಾಯ್ ಎಂಬ ಆರೋಪಿಯನ್ನು ಅಪರಾಧಿ ಎಂದು ಘೋಷಿಸಿದ್ದ ಸೀಲ್ಡಾ ಸೆಷನ್ಸ್ ನ್ಯಾಯಾಲಯ, ನೈಸರ್ಗಿಕ ಸಾವು ಬರುವವರೆಗೂ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.







