ಮೇಘಾಲಯದಲ್ಲಿ ರಘುವಂಶಿ ಕೊಲೆ ಪ್ರಕರಣ : ಹಂತಕರಿಗೆ 20 ಲಕ್ಷ ರೂ.ಸುಪಾರಿ ನೀಡಿದ್ದ ಸೋನಂ!
ಪತಿಯ ಮೃತದೇಹವನ್ನು ಕಂದಕಕ್ಕೆ ಎಸೆಯಲು ನೆರವಾಗಿದ್ದ ನವವಧು!

PC : PTI
ಹೊಸದಿಲ್ಲಿ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ರಾಜಾ ರಘುವಂಶಿ ಕೊಲೆ ಪ್ರಕರಣದ ವಿವರಗಳು ಒಂದೊಂದಾಗಿ ತನಿಖೆಯಿಂದ ಹೊರ ಬೀಳತೊಡಗಿವೆ. ಕೊಲೆ ಆರೋಪಿ ಸೋನಂ ತನ್ನ ಪತಿ ರಾಜಾ ರಘುವಂಶಿಯನ್ನು ಕೊಲೆಗೈಯಲು ಬಾಡಿಗೆ ಹಂತಕರಿಗೆ ಆರಂಭದಲ್ಲಿ 4 ಲಕ್ಷ ರೂ. ಸುಪಾರಿ ನೀಡಿದ್ದಳು. ಆದರೆ ಅವರು ಹಿಂದೇಟು ಹಾಕಿದಾಗ ಸುಪಾರಿಯ ಮೊತ್ತವನ್ನು 20 ಲಕ್ಷಕ್ಕೆ ಏರಿಸಿದ್ದಳು. ಮೇಘಾಲಯದಲ್ಲಿ ಸೋನಂ, ಪತಿಯ ಮೃತದೇಹವನ್ನು ಕಂದಕಕ್ಕೆ ಎಸೆಯುವಲ್ಲಿ ಹಂತಕರಿಗೆ ನೆರವಾಗಿದ್ದಳು ಎಂಬುದು ಕೂಡಾ ತನಿಖೆಯಿಂದ ಬೆಳಕಿಗೆ ಬಂದಿದೆ.
ರಾಜಾ ರಘುವಂಶಿಯ ಮೃತದೇಹವು , ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿರುವ ಸೊಹ್ರಾ ಪ್ರದೇಶ (ಚಿರಾಪುಂಜಿ)ದಲ್ಲಿ ಪತ್ತೆಯಾಗಿತ್ತು. ನವವಿವಾಹಿತ ದಂಪತಿಯಾದ ರಘುವಂಶಿ ಹಾಗೂ ಸೋನಂ ಹನಿಮೂನ್ಗೆ ಮೇಘಾಲಯಕ್ಕೆ ಆಗಮಿಸಿದ್ದರು.
ಸೋನಂ ಗೊತ್ತುಪಡಿಸಿದ ಬಾಡಿಗೆ ಹಂತಕರು ಮೊದಲ ಬಾರಿಗೆ ನವವಿವಾಹಿತ ದಂಪತಿಯನ್ನು ಬೆಂಗಳೂರಿನಲ್ಲಿ ಭೇಟಿಯಾದರು. ಅಲ್ಲಿಂದ ಅವರು ಕನೆಕ್ಟಿಂಗ್ ಫ್ಲೈಟ್ ಮೂಲಕ ಈಶಾನ್ಯ ಭಾರತಕ್ಕೆ ತೆರಳಿದ್ದರು. ಆವಾಗಿನಿಂದ ಕೊಲೆಯಾದ ರಘುವಂಶಿ ಹಾಗೂ ಆರೋಪಿಗಳು ಒಂದೇ ನಗರದಲ್ಲಿದ್ದರು ಹಾಗೂ ಪರಸ್ಪರ ಮಾತಾನಾಡಿಕೊಳ್ಳುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ.
ಮೇ 11ರಂದು ವಿವಾಹವಾದ ಕೇವಲ ಕೆಲವೇ ದಿನಗಳ ಆನಂತರ ಸೋನಂ ರಘುವಂಶಿಯು ತನ್ನ ಪ್ರಿಯಕರ ರಾಜ್ ಕುಶ್ವಾಹ್ನೊಂದಿಗೆ ಸೇರಿಕೊಂಡು ಪತಿ ರಘುವಂಶಿಯ ಕೊಲೆಗೆ ಸಂಚು ಹೂಡಿದ್ದಳು ಎನ್ನಲಾಗಿದೆ. ಕುಶ್ವಾಹ್ ಮೇಘಾಲಯಕ್ಕೆ ಪ್ರಯಾಣಿಸದಿದ್ದರೂ, ಆತ ತೆರೆಯಮರೆಯಲ್ಲಿ ಇದ್ದುಕೊಂಡೇ ಸೋನಂ ಜೊತೆಗೂಡಿ ರಘವಂಶಿಯ ಕೊಲೆಗೆ ಸಂಚು ರೂಪಿಸಿದ್ದನೆನ್ನಲಾಗಿದೆ.
ಮೇ23ರಂದು ಸೋನಂ ಹಾಗೂ ರಾಜಾ ರಘುವಂಶಿ ಜಲಪಾತವೊಂದರ ಕಡಿದಾದ ಪರ್ವತಕ್ಕೆ ಚಾರಣಕ್ಕೆ ತೆರಳಿದ್ದರು. ಹಂತಕರು ಅವರನ್ನು ಹಿಂಬಾಲಿಸತೊಡಗಿದರು. ಒಂದು ಹಂತದಲ್ಲಿ ಸೋನಂ ಪ್ರಯಾಸಗೊಂಡವಳಂತೆ ನಟಿಸಿದಳು ಹಾಗೂ ತನ್ನ ಪತಿ ಹಾಗೂ ಹಂತಕರಿಗಿಂತ ತುಂಬಾ ಹಿಂದೆ ನಡೆಯ ತೊಡಗಿದಳು. ಅವರು ನಿರ್ಜನ ಸ್ಥಳವನ್ನು ತಲುಪಿದಾಗ, ಸೋನಂ ಬಾಡಿಗೆ ಹಂತಕರಿಗೆ ತನ್ನ ಪತಿಯನ್ನು ಕೊಲ್ಲುವಂತೆ ಸೂಚಿಸಿದಳೆನ್ನಲಾಗಿದೆ.
ಆದರೆ ಈ ಕ್ಷಣದಲ್ಲಿ ಹಂತಕರು ತಮಗೆ ತುಂಬಾ ಸುಸ್ತಾಗಿದ್ದು, ರಘುವಂಶಿಯನ್ನು ಕೊಲ್ಲಲು ಸಾಧ್ಯವಿಲ್ಲವೆಂದು ಹೇಳಿದರೆನ್ನಲಾಗಿದೆ. ಆಗ ಸೋನಂ ಸುಪಾರಿಯ ಮೊತ್ತವನ್ನು 20 ಲಕ್ಷಕ್ಕೆ ಏರಿಸಿದಾಗ, ಅವರು ಸಮ್ಮತಿಸಿದರೆಂದು ತನಿಖಾ ಮೂಲಗಳು ತಿಳಿಸಿವೆ.
ರಾಜಾ ಅವರ ಮೃತದೇಹವನ್ನು ಕಂದಕಕ್ಕೆ ಎಸೆಯುವಲ್ಲಿಯೂ ಆರೋಪಿಗಳಿಗೆ ಸೋನಂ ನೆರವಾಗಿದ್ದಳೆಂದು ಮೂಲಗಳು ತಿಳಿಸಿವೆ.