Australiaದ ಬೋಂಡಿ ಬೀಚ್ ಗುಂಡಿನ ದಾಳಿ | ಧೈರ್ಯದಿಂದ ಮುನ್ನುಗ್ಗಿ ಗಾಯಾಳುಗಳಿಗೆ ನೆರವಾದ ಹೈದರಾಬಾದ್ ಮೂಲದ ಮುಹಮ್ಮದ್ ರಹ್ಮತ್ ಪಾಷಾ

ಮುಹಮ್ಮದ್ ರಹ್ಮತ್ ಪಾಷಾ
ಹೈದರಾಬಾದ್/ಸಿಡ್ನಿ: ಆಸ್ಟ್ರೇಲಿಯಾದ ಬೋಂಡಿ ಬೀಚ್ ನಲ್ಲಿ ಇತ್ತೀಚೆಗೆ ನಡೆದ ಗುಂಡಿನ ದಾಳಿ ಸಂದರ್ಭದಲ್ಲಿ, ತೆಲಂಗಾಣ ಮೂಲದ ಯುವಕನೊಬ್ಬ ಧೈರ್ಯವಾಗಿ ಮುನ್ನುಗ್ಗಿ ಗಾಯಾಳುಗಳಿಗೆ ನೆರವಾಗಿರುವುದು ಬೆಳಕಿಗೆ ಬಂದಿದೆ. ಹೈದರಾಬಾದ್ ನ 37 ವರ್ಷದ ಮುಹಮ್ಮದ್ ರಹ್ಮತ್ ಪಾಷಾ, ದಾಳಿ ನಡೆಯುತ್ತಿದ್ದರೂ ಸ್ಥಳದಲ್ಲೇ ಉಳಿದುಕೊಂಡು ಗಾಯಗೊಂಡವರಿಗೆ ಸಹಾಯ ಮಾಡಿದ್ದಾರೆ.
ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಮೂಲದವರಾದ ರಹ್ಮತ್ ಪಾಷಾ, ಈ ಹಿಂದೆ ಹೈದರಾಬಾದ್ ನ ಮಸಾಬ್ ಟ್ಯಾಂಕ್ ಪ್ರದೇಶದಲ್ಲಿ ವಾಸವಾಗಿದ್ದರು. ಘಟನೆ ನಡೆದ ದಿನ ಸಂಜೆ ಏಳು ಗಂಟೆಯ ನಂತರ ಬೀಚ್ ಫ್ರಂಟ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಮೊದಲಿಗೆ ಪಟಾಕಿ ಸಿಡಿದ ಶಬ್ದವೆಂದು ಭಾವಿಸಿದ ಶಬ್ದಗಳು ಕೇಳಿಬಂದವು. ಆದರೆ ಕ್ಷಣಾರ್ಧದಲ್ಲಿ ಜನರು ಕಿರುಚುತ್ತಾ ಬೀಳಲು ಆರಂಭಿಸಿದಾಗ ಗುಂಡಿನ ದಾಳಿ ನಡೆಯುತ್ತಿದೆಎಂಬುದು ಸ್ಪಷ್ಟವಾಯಿತು.
ಮುಹಮ್ಮದ್ ರಹ್ಮತ್ ಪಾಷಾ ನೀಡಿದ ಮಾಹಿತಿಯಂತೆ, ದಾಳಿಕೋರ ಅವರ ಮುಂದೆಯೇ ನಿಂತು ಗುಂಡು ಹಾರಿಸುತ್ತಿದ್ದನು. ತನ್ನ ಜೀವಕ್ಕೂ ಅಪಾಯವಿದ್ದರೂ, ಕಾಲಿಗೆ ಗುಂಡು ತಗುಲಿ ಸಹಾಯಕ್ಕಾಗಿ ಕೂಗುತ್ತಿದ್ದ ವೃದ್ಧ ಮಹಿಳೆಗೆ ನೆರವಾಗಲು ರಹ್ಮತ್ ಮುಂದಾದರು. ಆಕೆಯ ಪಕ್ಕದಲ್ಲೇ ಕುಳಿತು ಸಮಾಧಾನಪಡಿಸುತ್ತಾ ತುರ್ತು ಸೇವೆಗಳು ಸ್ಥಳಕ್ಕೆ ಆಗಮಿಸುವವರೆಗೂ ಅವರು ಜೊತೆಗಿದ್ದರು.
ಪೊಲೀಸರು ಹಾಗೂ ಆರೋಗ್ಯ ಸಿಬ್ಬಂದಿ ಆಗಮಿಸಿದ ನಂತರ, ಗಾಯಾಳುಗಳನ್ನು ಸ್ಟ್ರೆಚರ್ ಗಳಲ್ಲಿ ಹಾಗೂ ಆಂಬ್ಯುಲೆನ್ಸ್ ಗಳಿಗೆ ಸ್ಥಳಾಂತರಿಸಲು ಮುಹಮ್ಮದ್ ರಹ್ಮತ್ ಪಾಷಾ ಸಹಕರಿಸಿದರು. ಆ ಕ್ಷಣ ಘಟನಾ ಸ್ಥಳದಲ್ಲಿ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಜನರು ಭೀತಿಯಿಂದ ಎಲ್ಲಾ ದಿಕ್ಕುಗಳಲ್ಲೂ ಓಡಾಡುತ್ತಿದ್ದರು ಎಂದು ಅವರು ವಿವರಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುವೊಬ್ಬರು ನಂತರ ಮೃತಪಟ್ಟರು ಎಂದು ಪಾಷಾ ʼವಾರ್ತಾಭಾರತಿʼಗೆ ತಿಳಿಸಿದ್ದಾರೆ.
2019ರಲ್ಲಿ ಶೆಫ್ ತರಬೇತಿಗಾಗಿ ಆಸ್ಟ್ರೇಲಿಯಾಗೆ ತೆರಳಿದ್ದ ಮೂರು ಮಕ್ಕಳ ತಂದೆಯಾದ ಮುಹಮ್ಮದ್ ರಹ್ಮತ್ ಪಾಷಾ, ಈ ಘಟನೆ ತೀವ್ರ ಮಾನಸಿಕ ಆಘಾತ ಉಂಟುಮಾಡಿದೆ ಎಂದು ಹೇಳಿದ್ದಾರೆ. ದಾಳಿಯ ಬಳಿಕ ಅವರು ಕೆಲಸಕ್ಕೆ ಮರಳಿಲ್ಲ. ಆ ಕ್ಷಣ ಉಂಟಾದ ಆಘಾತಕ್ಕೆ ಪಾಷಾ ನಿದ್ರಾ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದ ಕೋಮು ನಿಂದನೆ ಹಾಗೂ ವಲಸೆ ವಿರೋಧಿ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿದ ಮುಹಮ್ಮದ್ ರಹ್ಮತ್ ಪಾಷಾ, ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ತಮ್ಮ ಸುತ್ತಮುತ್ತಲಿನ ಜನರಿಂದ ಬೆಂಬಲ ವ್ಯಕ್ತವಾಗಿದ್ದು, ಹೈದರಾಬಾದ್ ನಲ್ಲಿರುವ ಕುಟುಂಬವು ಅವರು ಶೀಘ್ರದಲ್ಲೇ ಸುರಕ್ಷಿತವಾಗಿ ಮನೆಗೆ ಮರಳುವ ನಿರೀಕ್ಷೆಯಲ್ಲಿದೆ.







