ಮತದಾನ ಪ್ರಕ್ರಿಯೆಯ ಸಿಸಿಟಿವಿ ದತ್ತಾಂಶ 45 ದಿನಗಳೊಳಗೆ ಅಳಿಸಿ; ಚುನಾವಣಾ ಆಯೋಗ ಆದೇಶದ ವಿರುದ್ಧ ರಾಹುಲ್ ಕಿಡಿ
‘ಚುನಾವಣಾ ಆಯೋಗದಿಂದ ಸಾಕ್ಷ್ಯನಾಶ’

PC : PTI
ಹೊಸದಿಲ್ಲಿ: ಚುನಾವಣೆಗಳಲ್ಲಿ ಪಾರದರ್ಶಕತೆಯನ್ನು ತರುವ ಬದಲಿಗೆ ಚುನಾವಣಾ ಆಯೋಗವು ಪುರಾವೆಗಳನ್ನು ನಾಶಪಡಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ಶನಿವಾರ ಆಪಾದಿಸಿದ್ದಾರೆ. ಚುನಾವಣಾ ಫಲಿತಾಂಶ ಪ್ರಕಟಗೊಂಡ 45 ದಿನಗಳ ಆನಂತರ ಮತ್ತು ಯಾರೂ ಫಲಿತಾಂಶವನ್ನು ಕಾನೂನಾತ್ಮಕವಾಗಿ ಪ್ರಶ್ನಿಸದೆ ಇದ್ದಲ್ಲಿ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿ ಸಿಸಿಟಿವಿ, ವೆಬ್ಕಾಸ್ಟಿಂಗ್ ಹಾಗೂ ವೀಡಿಯೋಗಳ ಫೂಟೇಜ್ (ದೃಶ್ಯಾವಳಿಗಳು)ನಂತಹ ಇಲೆಕ್ಟ್ರಾನಿಕ್ ದತ್ತಾಂಗಳನ್ನು ನಾಶಪಡಿಸಬೇಕೆಂದು ಚುನಾವಣಾ ಆಯೋಗವು, ರಾಜ್ಯಗಳ ಚುನಾವಣಾ ಅಧಿಕಾರಿಗಳಿಗೆ ಆದೇಶ ನೀಡಿದ ಬೆನ್ನಲ್ಲೇ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ರಾಹುಲ್ ಅವರು ಚುನಾವಣಾ ಆಯೋಗದ ನಡೆಯನ್ನು ಟೀಕಿಸಿದ್ದಾರೆ.
‘‘ ಮತದಾರರ ಪಟ್ಟಿಯನ್ನು ಕೇಳಿದರೆ, ಅದು ಮೆಶಿನ್ ರೀಡೇಬಲ್ ಫಾರ್ಮ್ಯಾಟ್ ನಲ್ಲಿ ಇರುವುದರಿಂದ ಅದನ್ನು ಒದಗಿಸಲು ಸಾಧ್ಯವಿಲ್ಲವೆಂದು ಚುನಾವಣಾ ಆಯೋಗ ಹೇಳುತ್ತಿದೆ. ಸಿಸಿಟಿವಿ ಫೂಟೇಜ್ ಗಳನ್ನು ಕೇಳಿದರೆ, ಅದನ್ನು ಮರೆಮಾಚಲು ಕಾನೂನುಗಳನ್ನೇ ಬದಲಾಯಿಸಲಾಗುತ್ತದೆ. ಸಿಸಿಟಿವಿ ವೀಡಿಯೊ ಫೂಟೇಜ್ ಹಾಗೂ ಫೋಟೋಗಳನ್ನು ಒಂದು ವರ್ಷ ಸಂರಕ್ಷಿಸಿಡುವ ಬದಲು ಅವನ್ನು ಕೇವಲ 45 ದಿನಗಳಲ್ಲಿ ಅಳಿಸಿಹಾಕಲಾಗುತ್ತಿದೆ. ಈ ಬಗ್ಗೆ ಉತ್ತರಗಳನ್ನು ನೀಡಬೇಕಾದವರೇ, ಪುರಾವೆಗಳನ್ನು ಅಳಿಸಿಹಾಕುತ್ತಿದ್ದಾರೆಂದು ರಾಹುಲ್ ಆಪಾದಿಸಿದ್ದಾರೆ.
(ಚುನಾವಣಾ) ಪಂದ್ಯವನ್ನು ಫಿಕ್ಸ್ ಮಾಡಲಾಗಿದೆಯೆಂಬುದು ಇದರಿಂದ ಸ್ಪಷ್ಟವಾಗಿ ತಿಳಿದುಬರುತ್ತದೆ. ಫಿಕ್ಸಿಂಗ್ ಆಗಿರುವ ಚುನಾವಣೆಯು ಪ್ರಜಾಪ್ರಭುತ್ವದ ಪಾಲಿಗೆ ವಿಷವಾಗಿದೆ’’ ಎಂದು ಕಾಂಗ್ರೆಸ್ ನಾಯಕ ಹಿಂದಿಯಲ್ಲಿ ಪೋಸ್ಟ್ಮಾಡಿದ್ದಾರೆ. ಚುನಾವಣಾ ಆಯೋಗದ ನಡೆಗಳ ಬಗ್ಗೆ ಅವರು ಗಾಢವಾದ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ವಿಧಾಸಭಾ ಚುನಾವಣೆಯಲ್ಲಿ ಅಕ್ರಮಗಳು ನಡೆದಿಯೆಂಬ ಆರೋಪಗಳ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ. ಮತದಾನದ ದತ್ತಾಂಶ ಹಾಗೂ ವೀಡಿಯೊ ಫೂಟೇಜ್ ಗಳನ್ನು ಪಡೆಯಲು ಅವಕಾಶ ನೀಡುವಂತೆ ರಾಹುಲ್ಗಾಂಧಿ ಅವರು ಚುನಾವಣಾ ಆಯೋಗವನ್ನು ಆಗ್ರಹಿಸುತ್ತಲೇ ಬಂದಿದ್ದಾರೆ.
ಮೇ 30ರಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಭಾರತೀಯ ಮುಖ್ಯ ಚುನಾವಣಾ ಆಯೋಗವು ಬರೆದ ಪತ್ರದಲ್ಲಿ, ಚುನಾವಣಾ ಪ್ರಕ್ರಿಯೆಯ ವಿವಿಧ ಹಂತಗಳಿಗೆ ಸಂಬಂಧಿಸಿದ ಸಿಸಿಟಿವಿ ರೆಕಾರ್ಡಿಂಗ್ ಗಳು,ವೆಬ್ಕಾಸ್ಟಿಂಗ್ ಫೂಟೇಜ್ ಹಾಗೂ ಛಾಯಾಗ್ರಹಣವನ್ನು, ಯಾವುದೇ ಚುನಾವಣಾ ತಕಾರಾರು ಅರ್ಜಿ ಸಲ್ಲಿಕೆಯಾಗದೆ ಇದ್ದಲ್ಲಿ ನಾಶಪಡಿಸಬೇಕೆಂದು ನಿರ್ದೇಶಿಸಿದ ಹಿನ್ನೆಲೆಯಲ್ಲಿ ಈ ವಿವಾದ ತಲೆಯೆತ್ತಿದೆ.
ಇಂತಹ ರೆಕಾರ್ಡಿಂಗ್ಗಳನ್ನು ಚುನಾವಣಾ ಕಾನೂನುಗಳು ಕಡ್ಡಾಯಗೊಳಿಸಿಲ್ಲ. ಅವುಗಳನ್ನು ಕೇವಲ ಚುನಾವಣೆಯಲ್ಲಿ ಪಾರದರ್ಶಕತೆಗೆ ಮತ್ತು ಚುನಾವಣಾ ಸಾಮಾಗ್ರಿಗಳ ಸಾಗಾಟಕ್ಕೆ ನೆರವಾಗುವ ಉದ್ದೇಶದಿಂದ ಆಂತರಿಕ ನಿರ್ವಹಣೆಯ ಸಾಧನವಾಗಿ ಬಳಸಲಾಗುತ್ತದೆ ಎಂದು ಚುನಾವಣಾ ಆಯೋಗವು ಸ್ಪಷ್ಟೀಕರಣ ನೀಡಿತ್ತು.







